ಪಾಕಿಸ್ತಾನದ ವಾಯುವ್ಯ ಭಾಗದ ರೆಸ್ಟೋರೆಂಟ್‌ವೊಂದನ್ನು ಗುರಿಯಾಗಿರಿಸಿಕೊಂಡು ಗುರುವಾರ ಬೆಳಿಗ್ಗೆ ಆತ್ಮಹತ್ಯಾ ದಾಳಿ ನಡೆಸಿದ ಪರಿಣಾಮ 11ಮಂದಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಆತ್ಮಹತ್ಯಾ ದಾಳಿಯಲ್ಲಿ ತಾಲಿಬಾನ್ ಕಮಾಂಡರ್ ಸೇರಿದಂತೆ 11ಮಂದಿ ಬಲಿಯಾಗಿರುವುದಾಗಿ ಅಧಿಕಾರಿಗಳು ಹೇಳಿದ್ದು, ತಾಲಿಬಾನ್, ಅಲ್ ಖಾಯಿದಾ ಪ್ರಾಬಲ್ಯ ಹೊಂದಿರುವ ಪ್ರದೇಶದಲ್ಲಿ ಈ ದಾಳಿ ನಡೆಸಲಾಗಿದೆ.
ಅಮೆರಿಕ ಸೈನಿಕ ಪಡೆ ಹಾಗೂ ಪಾಕ್ ಪಡೆಗಳು ಜಂಟಿಯಾಗಿ ಉಗ್ರರ ವಿರುದ್ಧ ಮಿಸೈಲ್ ದಾಳಿ ನಡೆಸುತ್ತಿವೆ. ಇಂದು ಬೆಳಿಗ್ಗೆ ದಕ್ಷಿಣ ವಜಿರಿಸ್ತಾನದಲ್ಲಿ ಆತ್ಮಹತ್ಯಾ ದಾಳಿ ನಡೆಸಲಾಗಿತ್ತು. ಟಂಕಾ ನಗರದ ರಸ್ತೆ ಸಮೀಪದ ರೆಸ್ಟೋರೆಂಟ್‌ವೊಂದಕ್ಕೆ ಆತ್ಮಹತ್ಯಾ ದಾಳಿ ನಡೆಸಿರುವುದಾಗಿ ಇಬ್ಬರು ಗುಪ್ತಚರ ಇಲಾಖೆಯ ಅಧಿಕಾರಿಗಳು ಅಸೋಸಿಯೇಶನ್ ಪ್ರೆಸ್‌ಗೆ ತಿಳಿಸಿದ್ದಾರೆ.
ಈ ದಾಳಿಯಿಂದಾಗಿ ಹಲವಾರು ಜನರು ಗಾಯಗೊಂಡಿದ್ದು, ಅವರೆಲ್ಲ ಅಪಾಯದಿಂದ ಪಾರಾಗಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಆದರೆ ಅಧಿಕಾರಿಗಳು ಯಾರೂ ಮಾಧ್ಯಮಗಳಿಗೆ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. |