ಪಾಕಿಸ್ತಾನದ ಇಂಟರ್ ಸರ್ವಿಸ್ ಇಂಟೆಲಿಜೆನ್ಸ್(ಐಎಸ್‌ಐ) ದಕ್ಷಿಣ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರಗಾಮಿ ಪಡೆಗಳಿಗೆ ನೇರವಾಗಿ ಎಲ್ಲಾ ರೀತಿಯ ನೆರವು ನೀಡುತ್ತಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ದಕ್ಷಿಣ ಅಫ್ಘಾನಿಸ್ತಾನದಲ್ಲಿ ಜಿಹಾದ್ ಪ್ರಚಾರ ಕಾರ್ಯದಲ್ಲಿ ತೊಡಗಿರುವ ತಾಲಿಬಾನ್ ಭಯೋತ್ಪಾದಕರಿಗೆ ಐಎಸ್‌ಐ ನೇರ ಬೆಂಬಲ ನೀಡುತ್ತಿದೆ ಎಂದು ಅಮೆರಿಕ ಸರ್ಕಾರದ ಅಧಿಕಾರಿಗಳು ತಿಳಿಸಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ಹೇಳಿದೆ.
ಐಎಸ್ಐ ತಾಲಿಬಾನ್ ಉಗ್ರರಿಗೆ ಆರ್ಥಿಕ ನೆರವು, ಶಸ್ತ್ರಾಸ್ತ್ರ ಹಾಗೂ ದಾಳಿಯ ರೂಪುರೇಶೆಗಳ ಕುರಿತಾಗಿ ಮಾರ್ಗದರ್ಶನ ನೀಡುತ್ತಿರುವುದಾಗಿಯೂ ವರದಿ ವಿವರಿಸಿದೆ.
ಅಲ್ಲದೇ ಅಫ್ಘಾನಿಸ್ತಾನದಲ್ಲಿ ತಾಲಿಬಾನ್, ಅಲ್ ಖಾಯಿದಾ ಉಗ್ರರನ್ನು ಮಟ್ಟಹಾಕುವ ನಿಟ್ಟಿನಲ್ಲಿ ಅಮೆರಿಕ 17ಸಾವಿರ ಸೈನಿಕರು ಆಗಮಿಸಲಿದ್ದಾರೆ. ಈ ಭಾಗದಲ್ಲಿ ಅಮೆರಿಕದ ಸೈನಿಕರು ಕಾರ್ಯಾಚರಣೆಗೆ ತಾಲಿಬಾನ್ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತ ಬಂದಿದೆ. ಆದರೆ ಅಮೆರಿಕ ಉಗ್ರರ ಕೂಗಿಗೆ ಬೆಲೆಕೊಡದೆ, ಸೈನಿಕ ಕಾರ್ಯಾಚರಣೆ ಮುಂದುವರಿಸಿದೆ.
ತಾಲಿಬಾನ್ ಸೇರಿದಂತೆ ಇನ್ನಿತರ ಭಯೋತ್ಪಾದನಾ ಸಂಘಟನೆಗಳಿಗೆ ಪಾಕಿಸ್ತಾನದ ಪ್ರಮುಖ ಗುಪ್ತಚರ ಇಲಾಖೆಯಾದ ಐಎಸ್‌ಐ ಎಲ್ಲಾ ರೀತಿಯ ನೆರವು ನೀಡುವ ಮೂಲಕ ಉಗ್ರರನ್ನು ಪೋಷಿಸುತ್ತಿದೆ ಎಂದು ಅಮೆರಿಕ ಆರೋಪಿಸಿರುವುದಾಗಿ ವರದಿ ತಿಳಿಸಿದೆ. ಅಲ್ಲದೇ ತಾಲಿಬಾನ್ ಮುಖಂಡರನ್ನು ಐಎಸ್‌ಐ ಅಧಿಕಾರಗಳು ನಿರಂತರವಾಗಿ ಭೇಟಿಯಾಗಿ ಮಾತುಕತೆ ನಡೆಸುತ್ತಿರುವ ಬಗ್ಗೆ ಸಾಕ್ಷಿ ಇರುವುದಾಗಿಯೂ ಹೇಳಿದೆ. |