ಉತ್ತರ ಕೊರಿಯ ದೂರಗಾಮಿ ಕ್ಷಿಪಣಿ ಪ್ರಯೋಗಿಸುತ್ತಿದೆಯೆಂದು ಅಮೆರಿಕ ಮತ್ತು ನೆರೆಯ ರಾಷ್ಟ್ರಗಳು ಎಣಿಸಿರುವ ವಿವಾದಾತ್ಮಕ ರಾಕೆಟ್ ಉಡಾವಣೆಯನ್ನು ತಡೆಹಿಡಿಯುವಂತೆ ರಷ್ಯಾ ಶುಕ್ರವಾರ ಉತ್ತರ ಕೊರಿಯಕ್ಕೆ ತಿಳಿಸಿದೆ.
ಉತ್ತರ ಕೊರಿಯ ಸರ್ಕಾರ ರಾಕೆಟ್ ಉಡಾವಣೆ ಮಾಡದೇ ಸಂಯಮದಿಂದ ವರ್ತಿಸುವುದು ಉತ್ತಮ ಎಂದು ರಷ್ಯಾ ಉಪವಿದೇಶಾಂಗ ಸಚಿವ ಅಲೆಕ್ಸೀ ಬೊರೊಡಾವ್ಕಿನ್ ತಿಳಿಸಿದರು.
ಏಪ್ರಿಲ್ ಆರಂಭದಲ್ಲಿ ಮುಸುದನ್-ರಿ ಉಡಾವಣೆ ಸ್ಥಳದಿಂದ ಸಂಪರ್ಕ ಉಪಗ್ರಹವನ್ನು ಉಡಾವಣೆ ಮಾಡುವುದಾಗಿ ಉತ್ತರ ಕೊರಿಯ ಕಳೆದ ತಿಂಗಳು ತನ್ನ ಯೋಜನೆಯನ್ನು ಪ್ರಕಟಿಸಿತ್ತು. ಆದರೆ ಟಾಯಿಪೊಡೊಂಗ್-2 ದೂರಗಾಮಿ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವೆಂದು ಅಮೆರಿಕ, ಜಪಾನ್ ಮತ್ತು ದಕ್ಷಿಣ ಕೊರಿಯ ಹೇಳುತ್ತಿದೆ. ನಾವು ಯಾವುದೇ ಪ್ರತಿಬೆದರಿಕೆಗಳು ಅಥವಾ ಗೊಂದಲವಿಲ್ಲದೇ ಪರಿಸ್ಥಿತಿಯನ್ನು ಶಾಂತವಾಗಿ ಪರಿಶೀಲಿಸಬೇಕಾಗಿದೆ.
ಉಡಾವಣೆಯ ಸುತ್ತ ಆವರಿಸಿರುವ ಎಲ್ಲ ವಿಷಯಗಳನ್ನು ಆಸಕ್ತ ರಾಷ್ಟ್ರಗಳ ನಡುವೆ ಮಾತುಕತೆ ಮತ್ತು ಸಮಾಲೋಚನೆ ಮೂಲಕ ನಿರ್ಧರಿಸುವುದಾಗಿ ಬೊರೊಡಾವ್ಕಿನ್ ತಿಳಿಸಿದ್ದಾರೆಂದು ಸುದ್ದಿಸಂಸ್ಥೆಯೊಂದು ಹೇಳಿದೆ. ಏತನ್ಮಧ್ಯೆ,ಉತ್ತರ ಕೊರಿಯ ರಾಕೆಟ್ ಜಪಾನ್ ಪ್ರದೇಶದೊಳಕ್ಕೆ ಬಿದ್ದರೆ ಅದನ್ನು ನಾಶ ಮಾಡಲು ಜಪಾನಿನ ಭದ್ರತಾ ಮಂಡಳಿ ಗ್ರೀನ್ ಸಿಗ್ನಲ್ ನೀಡಿದೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಕೂಡ ರಾಕೆಟ್ ಉಡಾವಣೆಯಿಂದ ಉತ್ತರಕೊರಿಯದ ಅಣ್ವಸ್ತ್ರ ನಿಶ್ಸಸ್ತ್ರೀಕರಣ ಮಾತುಕತೆಗೆ ಅಡ್ಡಿಯಾಗುತ್ತಾದ್ದರಿಂದ ಯಾವುದೇ ರೀತಿಯ ರಾಕೆಟ್ ಉಡಾವಣೆಯು ಪ್ರಚೋದನಾಕಾರಿ ಕ್ರಮವೆಂದು ಎಚ್ಚರಿಸಿದ್ದಾರೆ. |