ಇಂಡೋನೇಶಿಯದಲ್ಲಿ ಅಣೆಕಟ್ಟು ಕುಸಿದುಬಿದ್ದಿದ್ದರಿಂದ ಕಣ್ಮರೆಯಾಗಿರುವ ಸುಮಾರು 100ಕ್ಕೂ ಹೆಚ್ಚು ಜನರಿಗಾಗಿ ರಕ್ಷಣಾ ಕಾರ್ಯಕರ್ತರು ಶನಿವಾರ ಕೂಡ ಶೋಧ ನಡೆಸಿದರು. ಅಣೆಕಟ್ಟೆ ಕುಸಿದಿದ್ದರಿಂದ ಭಾರೀ ಪ್ರವಾಹವು ಜಕಾರ್ತದ ಉಪನಗರಕ್ಕೆ ನುಗ್ಗಿದ್ದರಿಂದ ಸತ್ತವರ ಸಂಖ್ಯೆ 67ಕ್ಕೆ ಮುಟ್ಟಿದೆ.
ಮಾನವನಿರ್ಮಿತ ಮಣ್ಣಿನ ಅಣೆಕಟ್ಟೆ ಶುಕ್ರವಾರ ಮುಂಜಾನೆ ಕುಸಿದು ನಿವಾಸಿಗಳು ನಿದ್ರಾವಶರಾಗಿದ್ದಾಗಲೇ ನೀರಿನ ಪ್ರವಾಹ ನುಗ್ಗಿ ನೂರಾರು ಕಟ್ಟಡಗಳು ನೆಲಸಮವಾಗಿವೆ. ನಾಪತ್ತೆಯಾಗಿರುವ ಸುಮಾರು 109 ಜನರನ್ನು ಶೋಧಿಸಲು ಮಣ್ಣು ಮತ್ತು ಅವಶೇಷಗಳ ರಾಶಿಯಲ್ಲಿ ದಿನವಿಡೀ ಶೋಧಿಸುವುದಾಗಿ ರಕ್ಷಣಾ ಕಾರ್ಯಕರ್ತರು ಹೇಳಿದ್ದಾರೆ.
ನಿಖರವಾಗಿ ಎಷ್ಟು ಮಂದಿ ಈ ದುರಂತದಲ್ಲಿ ಅಸುನೀಗಿದ್ದಾರೆಂದು ಹೇಳುವುದು ಕಷ್ಟ. ಏಕಂದರೆ ಸಿರೆಂಡು ಮತ್ತು ಸಿಪುಟ್ಯಾಟ್ ಉಪನಗರಗಳ ನಿವಾಸಿಗಳಲ್ಲಿ ಕೆಲವರು ಒಂದೇ ಹೆಸರನ್ನು ಹೊಂದಿರುವುದಾಗಿ ಸರ್ಕಾರದ ಬಿಕ್ಕಟ್ಟು ಕೇಂದ್ರದ ಮುಖ್ಯಸ್ಥ ರುಸ್ತಂ ಪಾಕಾಯ ತಿಳಿಸಿದರು. ಅಣೆಕಟ್ಟಿನ ಕಳಪೆ ನಿರ್ವಹಣೆಯಿಂದ ಅಣೆಕಟ್ಟು ಕುಸಿದುಬಿದ್ದಿದೆಯೆಂದು ನಿವಾಸಿಯೊಬ್ಬರು ತಿಳಿಸಿದ್ದಾರೆ.
|