ಕಳೆದ ತಿಂಗಳು ನಡೆದ ಬಿಡಿಆರ್ ಸೈನಿಕರ ದಂಗೆಯು ಬಾಂಗ್ಲಾದೇಶವನ್ನು ಅಂತರ್ಯುದ್ಧದ ಸುಳಿಗೆ ನೂಕುವ ವಿಫಲ ಯತ್ನ ಎಂದು ಪ್ರಧಾನಮಂತ್ರಿ ಶೇಖ್ ಹಸೀನಾ ತಿಳಿಸಿದ್ದು, ಸಂಚುಗಾರರು ಇನ್ನೂ ಸಕ್ರಿಯರಾಗಿದ್ದಾರೆಂದು ಎಚ್ಚರಿಸಿದ್ದಾರೆ. ಮುಂದಿನ ಮೂರು ದಿನಗಳಲ್ಲಿ ಸೈನಿಕರ ದಂಗೆ ಕುರಿತು ಉನ್ನತಾಧಿಕಾರದ ಸಮಿತಿ ವರದಿಯನ್ನು ನಿರೀಕ್ಷಿಸುತ್ತಿರುವುದಾಗಿ ಹೇಳಿದರು.
ಪಿತೂರಿಗಾರರು ಇನ್ನೂ ಸಕ್ರಿಯರಾಗಿದ್ದು, ಪುನಃ ದಾಳಿ ಮಾಡಬಹುದು ಎಂದು ಎಚ್ಚರಿಸಿದ ಹಸೀನಾ, ಜನರಿಗೆ ಜಾಗೃತರಾಗಿರುವಂತೆ ಕರೆ ನೀಡಿದರು. ಹಸೀನಾ ಸರ್ಕಾರ ಕೈಗೊಂಡ ಅನೇಕ ನಿರ್ಣಾಯಕ ಮತ್ತು ಸೂಕ್ಷ್ಮ ನಿರ್ಧಾರಗಳು ವಿವಿಧ ಪ್ರಭಾವಿ ಗುಂಪುಗಳನ್ನು ಕೆರಳಿಸಿದ್ದು, ಸೇನಾಧಿಕಾರಿಗಳ ಕಗ್ಗೊಲೆಯಲ್ಲಿ ಅನೇಕ ಪಿತೂರಿ ಸಿದ್ಧಾಂತಗಳನ್ನು ಭದ್ರತಾ ಮತ್ತು ರಾಜಕೀಯ ವಿಶ್ಲೇಷಕರು ಪರಿಶೀಲನೆ ನಡೆಸಿದ್ದಾರೆ.
ಸ್ಥಗಿತಗೊಂಡ ಶೇಖ್ ಮುಜಿಬುರ್ ರೆಹ್ಮಾನ್ ಹತ್ಯೆ ವಿಚಾರಣೆಗೆ ಮರುಚಾಲನೆ, 1971ರ ಯುದ್ಧ ಕ್ರಿಮಿನಲ್‌ಗಳ ವಿಚಾರಣೆ, ವ್ಯಾಪಕ ಉಗ್ರಗಾಮಿ ನಿಗ್ರಹ ಕಾರ್ಯಾಚರಣೆಗೆ ಸರ್ಕಾರ ಯೋಜಿಸಿದ ಬಳಿಕ ದಂಗೆ ಭುಗಿಲೆದ್ದಿತೆಂದು ಮಾಜಿ ರಾಯಭಾರಿ ಮತ್ತು ರಾಜಕೀಯ ವಿಶ್ಲೇಷಕ ಹರುನುರ್ ರಷೀದ್ ತಿಳಿಸಿದರು. |