ಪಾಕಿಸ್ತಾನದಲ್ಲಿ ಭಯೋತ್ಪಾದಕರ ಅಟ್ಟಹಾಸ ಮುಂದುವರಿದಿದ್ದು, ಸೋಮವಾರ ಮುಂಜಾನೆ ಅಜ್ಞಾತ ಬಂದೂಕುಧಾರಿಗಳು ಲಾಹೋರ್ ಬಳಿಯ ಮನಾವನ್ ಪೊಲೀಸ್ ತರಬೇತಿ ಕೇಂದ್ರದ ಆಸುಪಾಸಿನಲ್ಲಿ 8 ಸ್ಫೋಟಗಳನ್ನು ನಡೆಸಿದ್ದು, ಕನಿಷ್ಠ 20 ಮಂದಿ ಹತರಾಗಿದ್ದು, ಇತರ ಹಲವಾರು ಮಂದಿ ಗಾಯಗೊಂಡಿದ್ದಾರೆ.
ಮಾಧ್ಯಮದ ವರದಿಗಳ ಪ್ರಕಾರ, ಭಯೋತ್ಪಾದಕರ ಗುಂಪು ತರಬೇತಿ ಕೇಂದ್ರದ ಮೇಲೆ ನಸುಕಿನಲ್ಲಿ ಆರೂವರೆ ಗಂಟೆಯ ವೇಳೆಗೆ ಪ್ರವೇಶಿಸಿ ಗ್ರೆನೇಡ್‌ಗಳನ್ನು ಎಸೆದಿದ್ದು, ಸುಮಾರು 800 ತರಬೇತಿ ಪೊಲೀಸರನ್ನು ಒತ್ತೆಯಾಳಾಗಿ ಇರಿಸಿಕೊಂಡಿರುವುದಾಗಿ ಹೇಳಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಪೊಲೀಸರು ಇಡೀ ಪ್ರದೇಶವನ್ನು ಸುತ್ತುವರಿದಿದ್ದಾರೆ. ಪೊಲೀಸರು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ಇನ್ನೂ ಮುಂದುವರಿದಿದೆ. ಶಿಬಿರದ ಭದ್ರತಾ ಕೋಟೆಯೊಳಗೆ ನುಸುಳಲು ಕೆಲವು ಬಂದೂಕುಧಾರಿಗಳು ಪೊಲೀಸ್ ಸಮವಸ್ತ್ರ ಧರಿಸಿದ್ದರೆಂದು ವರದಿಯಾಗಿದೆ.
ಮಾನಾವನ್ ತರಬೇತಿ ಶಿಬಿರವು ಪಾಕಿಸ್ತಾನ ಪೊಲೀಸರ ಪ್ರಮುಖ ಶಿಬಿರವಾಗಿದ್ದು, ವಾಘಾ ಗಡಿಯ ಬಳಿ ಗ್ರಾಂಡ್ ಟ್ರಂಕ್ ರಸ್ತೆಯಲ್ಲಿದೆ. ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ದಾಳಿ ನಡೆದ ಬಳಿಕ ಲಾಹೋರ್‌ನಲ್ಲಿ ಎಲ್ಲರ ಗಮನ ಸೆಳೆದ ದಾಳಿ ಇದಾಗಿದೆ. ಇದೀಗ ದೇಶಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. |