ಪಾಕಿಸ್ತಾನಕ್ಕೆ ಸ್ವತಃ ಬೆದರಿಕೆಯಾಗಿರುವ ತಾಲಿಬಾನ್ ಮತ್ತಿತರ ಉಗ್ರಗಾಮಿಗಳ ಜತೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಸಖ್ಯವನ್ನು ಕಡಿದುಕೊಳ್ಳಬೇಕೆಂದು ಅಮೆರಿಕವು ಇಸ್ಲಾಮಾಬಾದ್‌ಗೆ ಒತ್ತಡ ಹೇರಿದೆ.
ಐಎಸ್‌ಐ ತಾಲಿಬಾನ್ ಮತ್ತು ಅಲ್ ಖಾಯಿದಾಗೆ ಸಕ್ರಿಯವಾಗಿ ನೆರವು ನೀಡುತ್ತಿರುವ ವರದಿಗಳನ್ನು ಕುರಿತು ಪ್ರಶ್ನಿಸಿದಾಗ, 'ಕೆಲವು ವರದಿಗಳು ಹೊಸದಲ್ಲ. ನಾವು ಅನೇಕ ಅನಿರೀಕ್ಷಿತ ಸಂದರ್ಭಗಳನ್ನು ನಿಭಾಯಿಸಬೇಕಾಗಿದೆ' ಎಂದು ಅಧ್ಯಕ್ಷ ಬರಾಕ್ ಒಬಾಮಾ ಸಿಬಿಎಸ್‌ಗೆ ತಿಳಿಸಿದರು.
ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಭಯೋತ್ಪಾದನೆ ನಿಗ್ರಹ ಪ್ರಯತ್ನಗಳಿಗೆ ಗಮನಹರಿಸಲು ತಾವು ಪ್ರಕಟಿಸಿದ ಆಫ್ಘನ್-ಪಾಕಿಸ್ತಾನ ನೀತಿ ಕುರಿತು ಬಣ್ಣಿಸುತ್ತಾ, 'ಇದು ಬಹಳ ಕಠಿಣ ಹಾದಿ.ತಾವು ಭ್ರಮೆಗಳಲ್ಲಿ ಮುಳುಗಿಲ್ಲ. ಇದು ಸುಲಭವಾಗಿದ್ದರೆ ಇಷ್ಟರಲ್ಲಿ ಮುಗಿಯುತ್ತಿತ್ತು' ಎಂದು ನುಡಿದಿದ್ದಾರೆ. ಆದ್ದರಿಂದ ಅಲ್ ಖಾಯಿದಾ ಸೋಲಿನ ಗುರಿಯಾಗಿರುವ ಕಾರ್ಯತಂತ್ರದ ಕಡೆ ನಾವು ಗಮನಹರಿಸಬೇಕಾಗಿದೆ ಎಂದು ಒಬಾಮಾ ಹೇಳಿದರು.
ಆದರೆ ಅಲ್ ಖಾಯಿದಾ ನಮಗೆ ಬೆದರಿಕೆಯಾಗದಂತೆ ಅದನ್ನು ದುರ್ಬಲಗೊಳಿಸುವ ಅಥವಾ ನಾಶಗೊಳಿಸುವುದಕ್ಕೆ ಅನೇಕ ತೊಡಕುಗಳನ್ನು ನಾವು ಗುರುತಿಸಿದ್ದೇವೆಂದು ಒಬಾಮಾ ಹೇಳಿದರು. ಆದ್ದರಿಂದ ಕೇವಲ ಬೆಳಕಿಲ್ಲದ ಹಾದಿಯಲ್ಲಿ ಪಯಣಿಸದಂತೆ ನಮ್ಮ ಕಾರ್ಯತಂತ್ರದಲ್ಲಿ ಹೊಂದಾಣಿಕೆ ಮತ್ತು ನಿಗಾ ವಹಿಸಬೇಕಾಗಿದೆ ಎಂದು ಒಬಾಮಾ ಹೇಳಿದರು.
ಫಾಕ್ಸ್ ನ್ಯೂಸ್‌ಗೆ ನೀಡಿದ ಪ್ರತ್ಯೇಕ ಸಂದರ್ಶನದಲ್ಲಿ, ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್ ಮಾತನಾಡುತ್ತಾ, 'ಖಂಡಿತವಾಗಿ ಅಲ್ ಖಾಯಿದಾವನ್ನು ಸೋಲಿಸಲು ಮತ್ತು ಆಫ್ಘಾನಿಸ್ತಾನ ಮತ್ತು ಪಶ್ಚಿಮ ಪಾಕಿಸ್ತಾನ ಸುರಕ್ಷಿತ ಸ್ವರ್ಗವಲ್ಲವೆಂದು ಖಾತರಿಗೆ ನೂತನ ನೀತಿಯು ಬದ್ಧವಾಗಿದೆ'ಯೆಂದು ಹೇಳಿದ್ದಾರೆ. |