ಕಳೆದ ಏಳು ಗಂಟೆಗಳ ಕಾಲ ಲಾಹೋರ್‌ನಲ್ಲಿ ಸೈನಿಕರು ಹಾಗೂ ಉಗ್ರರ ನಡುವಿನ ಕಾಳಗ ಕೊನೆಗೂ ಅಂತ್ಯ ಕಾಣುವ ಮೂಲಕ, ಒತ್ತೆಯಾಳುಗಳಾಗಿದ್ದ ಪೊಲೀಸರನ್ನು ಬಿಡುಗಡೆಗೊಳಿಸುವಲ್ಲಿ ಪಾಕ್ ಸೈನಿಕಪಡೆ ಯಶಸ್ವಿಯಾಗಿದೆ ಎಂದು ಪಾಕ್ ಮಾಧ್ಯಮದ ವರದಿ ತಿಳಿಸಿದೆ.
ಸೋಮವಾರ 27ಮಂದಿಯಷ್ಟು ಉಗ್ರರು ಏಕಾಏಕಿ ಪೊಲೀಸ್ ತರಬೇತಿ ಶಿಬಿರದ ಮೇಲೆ ದಾಳಿ ನಡೆಸಿದ ಪರಿಣಾಮ ಪೊಲೀಸರು ಸೇರಿದಂತೆ 20ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಅಂದಾಜು 800ಮಂದಿ ಪೊಲೀಸರನ್ನು ಉಗ್ರರು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದರು. ಎಡೆಬಿಡದೆ ಹೋರಾಟ ನಡೆಸಿದ ಪಾಕ್ ಸೈನಿಕರ ಯಶಸ್ವಿ ಕಾರ್ಯಾಚರಣೆಯಿಂದಾಗಿ ಲಾಹೋರ್ ಕದನ ಅಂತ್ಯಗೊಂಡಂತಾಗಿದ್ದು, ಉಗ್ರರು ಸೇನೆಗೆ ಶರಣಾಗಿದ್ದಾರೆ.
ಘರ್ಷಣೆಯಲ್ಲಿ 4ಮಂದಿ ಉಗ್ರರು ಸಾವನ್ನಪ್ಪಿರುವುದಾಗಿ ಆಂತರಿಕ ಸಚಿವ ರೆಹಮಾನ್ ಮಲಿಕ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ. ಉಗ್ರರ ವಿರುದ್ಧದ ಕಾರ್ಯಾಚರಣೆ ಯಶಸ್ವಿಗೊಂಡಿದ್ದರ ಹಿನ್ನೆಲೆಯಲ್ಲಿ ಪಾಕ್ ಸೇನೆ ವಿಜಯೋತ್ಸಾಹ ಆಚರಿಸುತ್ತಿದೆ.
|