ಐವರಿ ಕೋಸ್ಟ್ ಮತ್ತು ಮಾಲವಿ ನಡುವೆ ಅಬಿಡ್ಜಾನ್‌ನಲ್ಲಿ ನಡೆದ ಫುಟ್ಬಾಲ್ ಪಂದ್ಯದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ ಕನಿಷ್ಠ 22 ಮಂದಿ ಪ್ರೇಕ್ಷಕರು ಸಾವಿಗೀಡಾದ ದುರ್ಘಟನೆ ಭಾನುವಾರ ಸಂಭವಿಸಿದೆ.
ಹೌಫೆಟ್-ಬಾಯಿಗ್ನಿ ಸ್ಟೇಡಿಯಂನಲ್ಲಿ ಸುಮಾರು 36,000 ಜನರು ಸೇರಿದ್ದಾಗ ಗೋಡೆಯೊಂದು ಕುಸಿದು ಬಿದ್ದು, ಪ್ರೇಕ್ಷಕರು ದಿಕ್ಕಾಪಾಲಾಗಿ ಓಡಿದ್ದರಿಂದ ಕಾಲ್ತುಳಿತ ಉಂಟಾಯಿತೆಂದು ವರದಿಗಳು ತಿಳಿಸಿವೆ. ಸ್ಟೇಡಿಯಂನಲ್ಲಿ ಸಾಮರ್ಥ್ಯಕ್ಕಿಂತ ಮೀರಿ ಜನರು ಸೇರಿದ್ದರಲ್ಲದೇ ಇನ್ನಷ್ಟು ಮಂದಿ ಒಳಗೆ ತೂರಲು ಯತ್ನಿಸಿದರೆಂದು ತಿಳಿದುಬಂದಿದೆ.
ದುರಂತ ಸಂಭವಿಸಿದ ಬಳಿಕವೂ ಆಟವನ್ನು ಮುಂದುವರಿಸಿದ್ದು, ಐವರಿ ಕೋಸ್ಟ್ ಮಾಲವಿ ವಿರುದ್ಧ 5-0 ಅಂತರದಲ್ಲಿ ಗೆದ್ದಿದ್ದು, ಅನೇಕ ಮಂದಿ ಗಾಯಾಳುಗಳಿಗೆ ಸ್ಟೇಡಿಯಂನಲ್ಲಿ ಚಿಕಿತ್ಸೆ ನೀಡಲಾಯಿತು.
ಟಿಕೆಟ್‌ರಹಿತ ಪ್ರಯಾಣಿಕರು ಸ್ಟೇಡಿಯಂನಿಂದ ದೂರ ಉಳಿಯುವಂತೆ ರಾಷ್ಟ್ರೀಯ ಫುಟ್‌ಬಾಲ್ ಒಕ್ಕೂಟ ತಿಳಿಸಿದ್ದರೂ ಈ ಆದೇಶವನ್ನು ಧಿಕ್ಕರಿಸಿದ ಸಾವಿರಾರು ಜನರು ಐವರಿ ಕೋಸ್ಟ್ ಯುರೋಪ್ ಮೂಲದ ಫುಟ್‌ಬಾಲ್‌ನ ಖ್ಯಾತ ತಾರೆಗಳ ಆಟ ವೀಕ್ಷಿಸಲು ಗುಂಪು ಗುಂಪಾಗಿ ನುಗ್ಗಿದರೆಂದು ಹೇಳಲಾಗಿದೆ. ಹುಟ್ಟೂರಿನ ಹೀರೊ ಡೈಡರ್ ಡ್ರೋಗ್ಬಾ ಅತ್ಯಾಕರ್ಷಕ ಆಟಗಾರನಾಗಿದ್ದು, ದೈವಸ್ವರೂಪಿಯೆಂದು ಪ್ರೇಕ್ಷಕರು ಭಾವಿಸಿದ್ದರೆಂದು ಐವರಿ ಕೋಸ್ಟ್ ವರದಿಗಾರರು ತಿಳಿಸಿದ್ದಾರೆ. |