ನೇಪಾಳದ ಮಾಜಿ ರಾಜ ಜ್ಞಾನೇಂದ್ರ ಶಾ ಪುತ್ರ ಪರಾಸ್ ಶಾ ಸಿಂಗಪುರದ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ತಮ್ಮ ಚಿಕ್ಕಪ್ಪ ರಾಜ ಬೀರೇಂದ್ರ ಶಾ ಅವರ ಇಡೀ ಕುಟುಂಬವನ್ನು ನಾಶಮಾಡಿದ 2001ರ ಹತ್ಯಾಕಾಂಡದ ಕುರಿತು ಕೆಲವು ಅಜ್ಞಾತ ಸತ್ಯಾಂಶಗಳನ್ನು ಬಿಚ್ಚಿಟ್ಟಿದ್ದಾರೆ.
ಬಹುಕೋಟಿ ಡಾಲರ್ ಶಸ್ತ್ರಾಸ್ತ್ರ ಒಪ್ಪಂದವು ದುರದೃಷ್ಟಕಾರಿ ಘಟನೆಗೆ ದಾರಿ ಕಲ್ಪಿಸಿತು ಎಂದು ಪತ್ರಿಕೆ ತಿಳಿಸಿದೆ. ಬೆಲ್ಜಿಯನ್ ಎಸ್‌ಎಲ್‌ಆರ್‌ಗೆ ಬದಲಿಯಾಗಿ ನೇಪಾಳ ಸೇನೆಯು ಹೊಸ ಅಸ್ತ್ರಕ್ಕಾಗಿ ಹುಡುಕಾಡುತ್ತಿತ್ತು. ದೀಪೇಂದ್ರ ಕೋಲ್ಟ್ ಎ16 ಬಂದೂಕಿನ ಬದಲಿಗೆ ಜರ್ಮನ್ ಹೆಕ್ಲರ್ ಮತ್ತು ಕೋಚ್ ಜಿ36 ಪ್ರಹಾರ ಬಂದೂಕನ್ನು ಇಷ್ಟಪಟ್ಟಿದ್ದಾಗಿ ಮಾಜಿ ರಾಜಕುಮಾರ ತಿಳಿಸಿದ್ದಾನೆ.
ಆದರೆ ಅವರ ತಂದೆ ಇದಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಇದರಿಂದ ದೀಪೇಂದ್ರ ತೀವ್ರ ಹತಾಶನಾಗಿದ್ದನು ಮತ್ತು ತೃಪ್ತಿಯಿಂದ ಕುದಿಯುತ್ತಿದ್ದನು. ದೀಪೇಂದ್ರ ಪರ್ಯಾಯ ಜೀವನಕ್ಕಾಗಿ ಯೋಜನೆ ರೂಪಿಸಿದ್ದು, ಅದಕ್ಕೆ ಅಪಾರ ಹಣದ ಅಗತ್ಯವಿತ್ತು. ಶಸ್ತ್ರಾಸ್ತ್ರ ಒಪ್ಪಂದದಿಂದ ಸುಮಾರು 15 ಮಿಲಿಯ ಡಾಲರ್ ಗಳಿಸಬಹುದಾಗಿತ್ತು. 1990ರಲ್ಲಿ ಸಂಪೂರ್ಣ ರಾಜಪ್ರಭುತ್ವವನ್ನು ಕೈಬಿಡುವ ಬೀರೇಂದ್ರ ಶಾ ನಿರ್ಧಾರ ಕೂಡ ದೀಪೇಂದ್ರನನ್ನು ಕೆರಳಿಸಿತ್ತು.
ರಾಜಪ್ರಭುತ್ವ ತೊರೆಯುವ ಯೋಜನೆಯನ್ನು ತಂದೆ ತಿಳಿಸಿದ ಬಳಿಕ ದೀಪೇಂದ್ರ ಮುಂಚಿನಂತೆ ಇರಲಿಲ್ಲ. ರಾಜಮನೆತನದ ಹತ್ಯಾಕಾಂಡದ ಅಧಿಕೃತ ವರದಿಯಲ್ಲಿ ದೀಪೇಂದ್ರ ತಾನು ಆರಿಸಿದ ವಧು ದೇವಯಾನಿ ರಾನಾಳನ್ನು ಕುಟುಂಬ ವಿರೋಧಿಸಿದ್ದರಿಂದ ಕುಡಿದ ಮತ್ತಿನಲ್ಲಿ ಕುಟುಂಬದ ಮೇಲೆ ದೀಪೇಂದ್ರ ಗುಂಡುಹಾರಿಸಿದನೆಂದು ಹೇಳಲಾಗಿತ್ತು. ದೇವಯಾನಿ ಜತೆ ವಿವಾಹಕ್ಕೆ ಒಪ್ಪಿಗೆಸಿಗಲಿಲ್ಲವಾದರೂ, ದೀಪೇಂದ್ರ ಕುಡಿದ ಮತ್ತಿನಲ್ಲಿರಲಿಲ್ಲ ಎಂದು ಪರಾಸ್ ಹೇಳಿದ್ದಾರೆ. |