ಲಾಹೋರ್ ಬಳಿ ಪೊಲೀಸ್ ಅಕಾಡೆಮಿ ಮೇಲೆ ಮಾರಕ ದಾಳಿಯನ್ನು ಪ್ರಕ್ಷುಬ್ಧಪೀಡಿತ ದಕ್ಷಿಣ ವಜಿರಿಸ್ತಾನ ಬುಡಕಟ್ಟು ಪ್ರದೇಶದಲ್ಲಿ ಯೋಜಿಸಲಾಗಿದ್ದು, ಸೆರೆಸಿಕ್ಕ ಭಯೋತ್ಪಾಕರಲ್ಲೊಬ್ಬ ಆಫ್ಘಾನಿಸ್ತಾನದ ಪ್ರಜೆ ಎಂದು ಪಾಕಿಸ್ತಾನ ಒಳಾಡಳಿತ ಸಚಿವಾಲಯದ ಮುಖ್ಯಸ್ಥ ರೆಹ್ಮಾನ್ ಮಲಿಕ್ ತಿಳಿಸಿದ್ದಾರೆ.
ಮನಾವನ್ ಪೊಲೀಸ್ ತರಬೇತಿ ಶಿಬಿರದ ಮೇಲೆ ದಾಳಿಯನ್ನು ದಕ್ಷಿಣ ವಾಜಿರಿಸ್ತಾನದಲ್ಲಿ ಯೋಜಿಸಲಾಗಿದ್ದು, ಪಾಕಿಸ್ತಾನದ ಬುಡಕಟ್ಟು ಪ್ರದೇಶಗಳ ಉಗ್ರಗಾಮಿಗಳು ಗಡಿಯಾಚೆಯಿಂದ ತರಬೇತಿ ಪಡೆಯುತ್ತಿದ್ದರೆಂದು ಮಲಿಕ್ ವರದಿಗಾರರಿಗೆ ತಿಳಿಸಿದರು.
ಭಯೋತ್ಪಾದಕರ ವಿರುದ್ಧ ಬಳಸಿದ ಹೆಲಿಕಾಪ್ಟರ್‌ಗೆ ಗುರಿಯಿಡಲು ಶಂಕಿತನೊಬ್ಬ ಪ್ರಯತ್ನಿಸಿದಾಗ ಅವನನ್ನು ಗ್ರೇನೇಡ್ ಸಮೇತ ಬಂಧಿಸಲಾಗಿದ್ದು, ಅವನು ಆಫ್ಘಾನಿಸ್ತಾನದ ಪೂರ್ವ ಪಾಕ್ಟಿಕಾ ಪ್ರಾಂತ್ಯಕ್ಕೆ ಸೇರಿದವನೆಂದು ಹೇಳಲಾಗಿದೆ.
ತರಬೇತಿ ಶಿಬಿರದ ಮೇಲೆ ದಾಳಿ ಮಾಡಿದ ಭಯೋತ್ಪಾದಕರ ವಿರುದ್ಧ ಭದ್ರತಾಪಡೆಗಳಿಂದ 8 ಗಂಟೆಗಳ ಸುದೀರ್ಘ ಕಾರ್ಯಾಚರಣೆ ಬಳಿಕ ಮಲಿಕ್ ಸೋಮವಾರ ಸಂಜೆ ಮಾತನಾಡುತ್ತಿದ್ದರು. ಭಯೋತ್ಪಾದನೆ ಶಂಕಿತರನ್ನು ತನಿಖೆ ನಡೆಸಲಾಗುತ್ತಿದ್ದು, ಉನ್ನತ ಮಟ್ಟದ ತನಿಖಾ ಸಮಿತಿ ತನಿಖೆ ಪೂರ್ಣಗೊಳಿಸಿದ ಬಳಿಕ ಇನ್ನಷ್ಟು ವಿವರಗಳ ಲಭ್ಯವಾಗಲಿವೆ ಎಂದು ಒಳಾಡಳಿತ ಸಚಿವಾಲಯದ ಮುಖ್ಯಸ್ಥರು ತಿಳಿಸಿದರು. |