ಶ್ರೀಲಂಕಾದ ಈಶಾನ್ಯ ಭಾಗದಲ್ಲಿ ಎಲ್‌ಟಿಟಿಇ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಶ್ರೀಲಂಕಾ ಸರ್ಕಾರ, ಮಾನವೀಯತೆ ದೃಷ್ಟಿಯಿಂದ ಕದನಕ್ಕೆ ತಾತ್ಕಾಲಿಕ ವಿರಾಮ ಘೋಷಣೆಗೆ ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿಸಿದೆ.
ವಿರಾಮದಿಂದಾಗಿ ಶ್ರೀಲಂಕಾ-ಎಲ್‌ಟಿಟಿಇ ಯುದ್ಧವಲಯದಲ್ಲಿ ಸಿಕ್ಕಿಬಿದ್ದಿರುವ ನಾಗರಿಕರಿಗೆ ತಪ್ಪಿಸಿಕೊಳ್ಳಲು ಅವಕಾಶ ಸಿಗುತ್ತದೆಂದು ಹೇಳಲಾಗಿದೆ. ತಾತ್ಕಾಲಿಕ ವಿರಾಮದ ವಿವರಗಳನ್ನು ಸದ್ಯದಲ್ಲೇ ಕಾರ್ಯರೂಪಕ್ಕೆ ತರುವುದಾಗಿ ಹಿರಿಯ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಸರ್ಕಾರ ಮಾನವೀಯ ನೆಲೆಯ ತಾತ್ಕಾಲಿಕ ಕದನವಿರಾಮಕ್ಕೆ ಪರಿಶೀಲನೆ ನಡೆಸಿದ್ದು, ಅದರ ವಿಧಿವಿಧಾನವನ್ನು ಸದ್ಯದಲ್ಲೇ ರೂಪಿಸಲಾಗುವುದು ಎಂದು ಶ್ರೀಲಂಕಾ ವಿದೇಶಾಂಗ ಕಾರ್ಯದರ್ಶಿ ಡಾ. ಪಲಿತಾ ಕೊಹೊನಾ ತಿಳಿಸಿದರು.
ಶ್ರೀಲಂಕಾ-ಎಲ್‌ಟಿಟಿಇ ಯುದ್ಧವಲಯದಲ್ಲಿ ಸಾವಿರಾರು ನಾಗರಿಕರು ಸಿಕ್ಕಿಬಿದ್ದಿದ್ದು, ಅವರು ತಪ್ಪಿಸಿಕೊಳ್ಳಲು ಅವಕಾಶ ನೀಡುವುದಕ್ಕಾಗಿ ಯುದ್ಧಕ್ಕೆ ತಾತ್ಕಾಲಿಕ ವಿರಾಮ ಘೋಷಿಸುವಂತೆ ವಿಶ್ವಸಂಸ್ಥೆ ಮತ್ತಿತರ ಅಂತಾರಾಷ್ಟ್ರೀಯ ಸಂಸ್ಥೆಗಳು ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಿದ್ದವು. ಕಳೆದ ಎರಡು ತಿಂಗಳ ಹೋರಾಟದಲ್ಲಿ 3000 ಅಮಾಯಕ ನಾಗರಿಕರು ಬಲಿಯಾಗಿದ್ದು, 7000 ಮಂದಿ ಗಾಯಗೊಂಡಿದ್ದಾರೆಂದು ವಿಶ್ವಸಂಸ್ಥೆ ತಿಳಿಸಿದೆ. |