ಸುಮಾರು 250 ಅಕ್ರಮ ವಲಸೆಗಾರರಿಂದ ತುಂಬಿದ್ದ ಯುರೋಪ್‌ನತ್ತ ತೆರಳುತ್ತಿದ್ದ ದೋಣಿಯೊಂದು ಲಿಬ್ಯಾ ಕಡಲ ತೀರದಲ್ಲಿ ಮುಳುಗಿರುವುದಾಗಿ ಲಿಬ್ಯಾ ಮತ್ತು ಈಜಿಪ್ಟ್ ವರದಿಗಳು ತಿಳಿಸಿವೆ. ಕನಿಷ್ಠ 21 ಜನರು ಸತ್ತಿದ್ದು 20 ಮಂದಿಯನ್ನು ರಕ್ಷಿಸಲಾಗಿದೆ ಎಂದು ಲಿಬ್ಯಾದ ಅಧಿಕಾರಿಗಳು ತಿಳಿಸಿದ್ದರೂ, ದೋಣಿಯಲ್ಲಿದ್ದ ಇನ್ನುಳಿದವರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.
ಸುಮಾರು 300 ಜನರನ್ನು ಸಾಗಿಸುತ್ತಿದ್ದ ಎರಡನೇ ದೋಣಿ ಸಹ ಅದೇ ಪ್ರದೇಶದಲ್ಲಿ ಮುಳುಗಿದ್ದಾಗಿ ಖಚಿತವಲ್ಲದ ವರದಿಗಳು ಹೇಳಿವೆ. ಲಿಬ್ಯಾದ ರಾಜಧಾನಿ ತ್ರಿಪೋಲಿ ಬಳಿ ಸಿಡಿ ಬಿಲಾಲ್‌ನಿಂದ ಹೊರಟ ದೋಣಿ ಸ್ವಲ್ಪ ಹೊತ್ತಿನಲ್ಲೇ ತೊಂದರೆಗಳಿಗೆ ಸಿಲುಕಿತೆಂದು ತಿಳಿದುಬಂದಿದೆ.
20 ಜನರನ್ನು ಲಿಬ್ಯಾದ ರಕ್ಷಣಾ ತಂಡ ರಕ್ಷಿಸಿದರೂ, ಹತ್ತಾರು ವಲಸೆಗಾರರು ನೀರುಪಾಲಾಗಿದ್ದಾರೆಂದು ಶಂಕಿಸಲಾಗಿದೆ. ಸತ್ತವರಲ್ಲಿ 10 ಮಂದಿ ಈಜಿಪ್ಟ್ ಪೌರರಾಗಿದ್ದು, ಉಳಿದವರ ಪೌರತ್ವ ತಕ್ಷಣಕ್ಕೆ ತಿಳಿದುಬಂದಿಲ್ಲ.
ಯುರೋಪ್‌ನಲ್ಲಿ ಹೊಸ ಜೀವನಾರಂಭ ಬಯಸುವ ಅಕ್ರಮ ವಲಸೆಗಾರರಿಗೆ ಲಿಬ್ಯಾ ಜನಪ್ರಿಯ ಮಾರ್ಗವಾಗಿದೆ.ದೋಣಿಯಲ್ಲಿದ್ದ ಬಹುತೇಕ ಮಂದಿ ಈಜಿಪ್ಟ್ ಪೌರರಾಗಿದ್ದು, ಅಲ್ಲಿ ನಿರುದ್ಯೋಗ ಅಧಿಕ ಪ್ರಮಾಣದಲ್ಲಿದ್ದು ಇಟಲಿ ಕಡೆಗೆ ಅವರು ತೆರಳುತ್ತಿದ್ದರೆಂದು ವರದಿಗಾರರು ತಿಳಿಸಿದ್ದಾರೆ. |