ಭೂಗತ ಲೋಕದ ಮೋಸ್ಟ್ ವಾಂಟೆಡ್ ಪಾತಕಿ ದಾವೂದ್ ಇಬ್ರಾಹಿಂನ ಕಿರಿಯ ಸೋದರ ನೂರುಲ್ ಹಖ್ ಅಲಿಯಾಸ್ ನೂರಾ ದುಬೈನಲ್ಲಿ ಮಂಗಳವಾರ ಬೆಳಿಗ್ಗೆ ಕ್ಯಾನ್ಸರ್ ಕಾಯಿಲೆಯಿಂದ ಸತ್ತಿದ್ದಾನೆ.
1993ರಲ್ಲಿ ನಡೆದ ಮುಂಬೈ ಸರಣಿ ಸ್ಫೋಟಗಳಲ್ಲಿ ಮುಖ್ಯ ಆರೋಪಿಗಳಲ್ಲಿ ನೂರಾ ಒಬ್ಬನಾಗಿದ್ದಾನೆ. ಸುದೀರ್ಘ ಕಾಲದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನೂರಾ, ಮಂಗಳವಾರ ಮುಂಜಾನೆ 4 ಗಂಟೆಗೆ ಸತ್ತಿದ್ದಾನೆಂದು ವರದಿಗಳು ತಿಳಿಸಿವೆ. ಅವನ ಕುಟುಂಬದ ಕೆಲವರು ಇನ್ನೂ ವಾಸವಿರುವ ಮುಂಬೈಗೆ ಅವನ ದೇಹವನ್ನು ಇಂದು ರಾತ್ರಿ ಕಳಿಸಲಾಗುವುದು.
ನೂರಾ ದುಬೈನಲ್ಲಿ ಸುದೀರ್ಘ ಕಾಲದಿಂದ ವಾಸವಿದ್ದು, ದಾವೂದ್ ಡಿ ಕಂಪೆನಿಯ ವ್ಯವಹಾರಗಳನ್ನು ನಕಲಿ ಹೆಸರುಗಳಲ್ಲಿ ನಿಭಾಯಿಸುತ್ತಿದ್ದನೆಂದು ಹೇಳಲಾಗಿದೆ. ಡಿ-ಕಂಪನಿ ಕುರಿತು ಭಾರತ ಸರ್ಕಾರ ಸಿದ್ಧಪಡಿಸಿರುವ ದಾಖಲೆ ಪ್ರಕಾರ, ದಾವೂದ್‌ನ ಐವರು ಸೋದರರು ಮತ್ತು ಮೂವರು ಸೋದರಿಯರು ಅವನ ಬಹುಕೋಟಿ ಸಾಮ್ರಾಜ್ಯವನ್ನು ದುಬೈನಿಂದ ನಿರ್ವಹಿಸುತ್ತಿದ್ದರು.
ಸುಲಿಗೆ, ಬಾಡಿಗೆ ಹತ್ಯೆಗಳು, ಅಪಹರಣ, ಮಾದಕವಸ್ತು ಕಳ್ಳಸಾಗಣೆ ಮತ್ತು ನಕಲಿ ಕರೆನ್ಸಿ ಜಾಲಗಳಲ್ಲಿ ಡಿ ಕಂಪೆನಿ ವ್ಯವಹರಿಸುತ್ತಿದೆಯೆಂದು ಹೇಳಲಾಗಿದೆ. ಡಿ ಕಂಪನಿಯ ಪ್ರಮುಖರು ಐಷಾರಾಮಿ ಜೀವನ ನಡೆಸುತ್ತಿದ್ದು, ದುಬೈನಲ್ಲಿ ಮೂರು ಮನೆಗಳನ್ನು ಹೊಂದಿದ್ದಾರೆ.
ನೂರುಲ್ ಹಕ್ ಅಲಿಯಾಸ್ ನೂರಾ ಹೊರತುಪಡಿಸಿ, ಉಳಿದವರು ಅವರ ಸೋದರರಾದ ಅನೀಸ್ ಇಬ್ರಾಹಿಂ, ಮುಸ್ತಾಕಿಂ, ಹುಮಾಯೂನ್ ಮತ್ತು ಇಕ್ಬಾಲ್ ಹಸನ್ ಹಾಗೂ ಮೂವರು ಸೋದರರಾದ ಜೈತೂನ್, ಫರ್ಜಾನಾ ಮತ್ತು ಮಮ್ತಾಜ್ ದುಬೈನಲ್ಲಿ ವಾಸ್ತವ್ಯ ಹೂಡಿದ್ದಾರೆ. ದಾವೂದ್ ಏಕೈಕ ಸೋದರಿ ಹಸೀನ ಮುಂಬೈನಲ್ಲಿ ವಾಸವಿದ್ದು, ಹಸೀನಾ ಪತಿ ಇಬ್ರಾಹಿಂ ಪಾರ್ಕರ್‌ನನ್ನು ಮುಂಬೈ ರೆಸ್ಟರೆಂಟ್‌ನಲ್ಲಿ ಹತ್ಯೆ ಮಾಡಲಾಗಿತ್ತು. |