ಜಿ20 ಆರ್ಥಿಕ ಶೃಂಗಸಭೆಗೆ ಮುನ್ನಾ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಮಂಗಳವಾರ ಬ್ರಿಟನ್‌ಗೆ ಆಗಮಿಸಿದ್ದು, ಶ್ವೇತಭವನಕ್ಕೆ ಕಾಲಿರಿಸಿದ ಬಳಿಕ ಕುತೂಹಲದಿಂದ ನಿರೀಕ್ಷಿಸುತ್ತಿದ್ದ ಪ್ರಪ್ರಥಮ ವಿದೇಶಿ ಭೇಟಿಯಾಗಿದೆ.
ಈಶಾನ್ಯ ಲಂಡನ್‌ನ ಸ್ಟಾನ್‌ಸ್ಟಡ್ ವಿಮಾನನಿಲ್ದಾಣಕ್ಕೆ ಒಬಾಮಾ ಆಗಮಿಸಿದ್ದಾರೆಂದು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಛಾಯಾಗ್ರಾಹಕರೊಬ್ಬರು ತಿಳಿಸಿದ್ದಾರೆ.
ಬಳಿಕ ಅಮೆರಿಕದ ಅಧ್ಯಕ್ಷರು 'ಮೆರೈನ್ ಒನ್' ಸಂಕೇತನಾಮದ ತಮ್ಮ ಹೆಲಿಕಾಪ್ಟರ್ ಏರಿ ಮಧ್ಯ ಲಂಡನ್‌ನಲ್ಲಿರುವ ಅಮೆರಿಕದ ರಾಯಭಾರಿಗಳ ನಿವಾಸಕ್ಕೆ ತೆರಳಿದರು. ರಷ್ಯಾದ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೇವ್ ಮತ್ತು ಚೀನಾ ಅಧ್ಯಕ್ಷ ಹು ಜಿಂಟಾವೊ ಅವರನ್ನು ಲಂಡನ್‌ನಲ್ಲಿ ಬುಧವಾರ ಭೇಟಿಯಾಗಲಿರುವ ಒಬಾಮಾ ಜಾಗತಿಕ ವೇದಿಕೆಗೆ ಚೊಚ್ಚಲ ಪ್ರವೇಶದಲ್ಲೇ ಕಠಿಣ ಪರೀಕ್ಷೆಗಳನ್ನು ಎದುರಿಸಲಿದ್ದಾರೆ.
ಬ್ರಿಟನ್ ಪ್ರಧಾನಮಂತ್ರಿ ಗೋರ್ಡನ್ ಬ್ರೌನ್ ಅವರನ್ನು ಕೂಡ ಭೇಟಿ ಮಾಡಲಿರುವ ಅಧ್ಯಕ್ಷರು ಜಂಟಿ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಿದ್ದಾರೆ.ಒಂದೊಮ್ಮೆ ಬಲಿಷ್ಠವಾಗಿದ್ದ ಅಮೆರಿಕದ ಆರ್ಥಿಕತೆ ಮತ್ತು ಜಾಗತಿಕ ಆರ್ಥಿಕ ವ್ಯವಸ್ಥೆ ತೀವ್ರ ಬಿಕ್ಕಟ್ಟಿನಲ್ಲಿ ಸಿಲುಕಿದ್ದು, ಒಬಾಮಾ ಅವರಿಗೆ ಗುರುವಾರದ ಶೃಂಗಸಭೆಯಲ್ಲಿ ಕಾದಿರುವ ಪರೀಕ್ಷೆ ಹಿಂದೆ ಯಾವ ಅಮೆರಿಕದ ಅಧ್ಯಕ್ಷರೂ ಎದುರಿಸಿರಲಿಲ್ಲ. ನ್ಯಾಟೊದ ಸಾಂಕೇತಿಕ 60 ವಾರ್ಷಿಕ ಶೃಂಗಸಭೆ ಸಲುವಾಗಿ ಒಬಾಮಾ ಫ್ರಾನ್ಸ್ ಮತ್ತು ಜರ್ಮನಿಗೆ ಶುಕ್ರವಾರ ಭೇಟಿಯಾಗಲಿದ್ದಾರೆ. |