ತಮ್ಮ ಬಲಪಂಥೀಯ ಸರ್ಕಾರಕ್ಕೆ ಸಂಸತ್ತಿನ ಅನುಮೋದನೆಯಲ್ಲಿ ಜಯಗಳಿಸಿದ ಬೆಂಜಮಿನ್ ನೆತಾನ್ಯಾಹು ಇಸ್ರೇಲಿನ ಪ್ರಧಾನಮಂತ್ರಿಯಾಗಿ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.
ತಮ್ಮ ಸಂಪುಟದ ಪರಿಚಯ ಭಾಷಣದಲ್ಲಿ ಇಸ್ರೇಲ್ ಜತೆ ಶಾಂತಿ ಸಾಧ್ಯವೆಂದು ಪ್ಯಾಲೆಸ್ಟೀನಿಯರಿಗೆ ಭರವಸೆ ನೀಡಿದರು. ಫೆ.10ರ ಚುನಾವಣೆ ಬಳಿಕ ದೊಡ್ಡ ಪಕ್ಷವಾಗಿ ಹೊಮ್ಮಿದ ಬಲಪಂಥೀಯ ಲಿಕುಡ್ ಪಕ್ಷದ ನೆತಾನ್‌ಹ್ಯೂ ಇಸ್ರೇಲ್ ಅಸ್ತಿತ್ವಕ್ಕೆ ಬೆದರಿಕೆಯೊಡ್ಡಿರುವ ಇರಾನ್ ಮತ್ತು ತೀವ್ರವಾದಿ ಇಸ್ಲಾಂ ವಿರುದ್ಧ ವಾಗ್ದಾಳಿ ನಡೆಸಿದರು.
ಮೂಲಭೂತವಾದಿ ಆಡಳಿತವು ಪರಮಾಣು ಅಸ್ತ್ರಗಳೊಂದಿಗೆ ಸಜ್ಜಾಗುವ ಸಾಧ್ಯತೆಯು ಮಾನವ ಪೀಳಿಗೆಗೆ ಮತ್ತು ಇಸ್ರೇಲ್‌ಗೆ ಮಹಾನ್ ಬೆದರಿಕೆಯೆಂದು ಪರೋಕ್ಷವಾಗಿ ಇರಾನ್ ಹೆಸರನ್ನು ಪ್ರಸ್ತಾಪಿಸುತ್ತಾ ಅವರು ಹೇಳಿದರು. ಅವಿಗ್ಡಾರ್ ಲೈಬರ್‌ಮ್ಯಾನ್ ವಿದೇಶಾಂಗ ಸಚಿವರಾಗಿರುವ ಕ್ಯಾಬಿನೆಟ್ ಪಟ್ಟಿಯನ್ನು ನೆತಾನ್‌ಹ್ಯೂ ಓದಿದರು.
ಸಂಸತ್ತು 6 ಗಂಟೆಗಳ ವಾದವಿವಾದಗಳ ಬಳಿಕ 69-45 ಮತಗಳಿಂದ ನೇಮಕಗಳನ್ನು ಅನುಮೋದಿಸಿತು. ನೆತಾನ್‌ಹ್ಯೂ ಮತ್ತು ಸಹ ಸಂಪುಟ ಸದಸ್ಯರು ಬಳಿಕ ಪ್ರಮಾಣವಚನ ಸ್ವೀಕರಿಸಿದರು. ನೀವು ನಿಜವಾಗಲೂ ಶಾಂತಿ ಬಯಸಿದ್ದರೆ ನಾವು ಶಾಂತಿಯನ್ನು ಸಾಧಿಸಬಹುದು ಎಂದು ನೆತಾನ್‌ಹ್ಯೂ ಪ್ಯಾಲೇಸ್ಟೀನ್ ನಾಯಕತ್ವಕ್ಕೆ ತಿಳಿಸಿದರು. ಪ್ಯಾಲೇಸ್ಟೀನ್ ಅಧಿಕಾರಿಗಳ ಜತೆ ಆರ್ಥಿಕ, ಭದ್ರತೆ ಮತ್ತು ರಾಜತಾಂತ್ರಿಕದ ಮೂರು ಸಮಾನಾಂತರ ಹಳಿಗಳ ಮೇಲೆ ಮಾತುಕತೆಗಳ ಪ್ರಸ್ತಾವನೆಯನ್ನು ಅವರು ಮಂಡಿಸಿದರು. |