ದ್ವೀಪದ ಜರ್ಜರಿತ ಉತ್ತರದಲ್ಲಿ ಶ್ರೀಲಂಕಾ ಭದ್ರತಾಪಡೆಗಳ ಜತೆ ತೀಕ್ಷ್ಣ ಕಾಳಗದಲ್ಲಿ ಎಲ್‌ಟಿಟಿಇ ವರಿಷ್ಠ ಪ್ರಭಾಕರನ್ ಪುತ್ರ ಚಾರ್ಲ್ಸ್ ಆಂಥೋನಿ ಗಾಯಗೊಂಡಿದ್ದಾನೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಭಾಕರನ್ ಒಬ್ಬ ಪುತ್ರಿ ಮತ್ತು ಇಬ್ಬರು ಪುತ್ರರಲ್ಲಿ ಹಿರಿಯವನಾದ 24 ವರ್ಷ ಪ್ರಾಯದ ಚಾರ್ಲ್ಸ್ ವ್ಯಾಘ್ರಗಳ ಕೋಟೆ ಪುದುಕುಡಿಯರುಪ್ಪುನಲ್ಲಿ ನಡೆದ ಹೋರಾಟದಲ್ಲಿ ಗಾಯಗೊಂಡಿದ್ದಾನೆಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದರು.
ಎಲ್‌ಟಿಟಿಇ ಹಿಡಿತದ ಉಳಿದ ಪ್ರದೇಶಗಳ ಕೈವಶಕ್ಕೆ ಶ್ರೀಲಂಕಾ ಸೇನೆಯು ಆಳಪ್ರದೇಶದೊಳಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದು, ಬಂಡುಕೋರರ ತುಕಡಿಯನ್ನು ಮುನ್ನಡೆಸುತ್ತಿದ್ದ ಚಾರ್ಲ್ಸ್ ಮಾ.8ರಂದು ಗಾಯಗೊಂಡ ಎಂದು ಅಧಿಕೃತ ಮೂಲಗಳು ಹೇಳಿವೆ.ವ್ಯಾಘ್ರಪಡೆಯ ಪ್ರಮುಖ ನಾಯಕರಾದ ಬಾನು ಮತ್ತು ಲಕ್ಷ್ಮಣ್ ಜತೆ ಚಾರ್ಲ್ಸ್ ಭದ್ರತಾ ಪಡೆ ವಿರುದ್ಧ ಹೋರಾಡುತ್ತಿದ್ದನೆಂದು ಆತ್ಮಾಹುತಿ ತುಕಡಿಗೆ ಸೇರಿದ ಬಂಧಿತ ಎಲ್‌ಟಿಟಿಇ ಕಾರ್ಯಕರ್ತನೊಬ್ಬ ತಿಳಿಸಿದ್ದಾನೆ.
ಏತನ್ಮಧ್ಯೆ, ಫಿರಂಗಿ ದಾಳಿಯಿಂದ ತೀವ್ರವಾಗಿ ಗಾಯಗೊಂಡ ಚಾರ್ಲ್ಸ್‌ರನ್ನು ಎಲ್‌ಟಿಟಿಇ ಕಾರ್ಯಕರ್ತರು ಪ್ರಸಕ್ತ ಗುಂಡುಹಾರಿಸದ ವಲಯಕ್ಕೆ ಒಯ್ದಿದ್ದು, ಪ್ರಭಾಕರನ್ ವೈದ್ಯರು ಚಾರ್ಲ್ಸ್‌ಗೆ ಚಿಕಿತ್ಸೆ ನೀಡುತ್ತಿದ್ದಾರೆಂದು 'ದಿ ಬಾಟಂಲೈನ್ ಸುದ್ದಿಪತ್ರಿಕೆ ವರದಿ ಮಾಡಿದೆ. ಟೊರಂಟೊನಲ್ಲಿ ವಾಸಿಸುವ ಎಲ್‌ಟಿಟಿಇ ನಿಷ್ಠ ಎಸ್. ರಾಮಚಂದ್ರನ್ ಅವರಿಗೆ ಈಮೇಲ್ ಮೂಲಕ ಈ ಸಂದೇಶ ತಲುಪಿದೆಯೆಂದು ವರದಿ ಹೇಳಿದೆ.
ಕೆನಡಾದ ತಮಿಳು ಜನಾಂಗದವರಿಂದ ರಾಮಚಂದ್ರನ್ ನಿಧಿ ಸಂಗ್ರಹಿಸುತ್ತಿದ್ದನೆಂದು ನಂಬಲಾಗಿದೆ. ಅವನು ಪ್ರಭಾಕರನ್ ಪತ್ನಿ ಮಧಿವಡನಿ ಬಂಧುವಾಗಿದ್ದಾನೆ. ತಮ್ಮ ಮಗನಿಗೆ ಗಾಯವಾದ ಬಗ್ಗೆ ಪ್ರಭಾಕರನ್ ತೀವ್ರ ಕಳವಳಕ್ಕೀಡಾಗಿದ್ದಾನೆಂದು ಈಮೇಲ್ ತಿಳಿಸಿದೆ.
ಕೆಲವು ವರ್ಷಗಳ ಹಿಂದೆ ಶ್ರೀಲಂಕಾ ಸೇನೆಯ ಜತೆ ಸಂಘರ್ಷದಲ್ಲಿ ಪ್ರಭಾಕರನ್ ನಿಕಟವರ್ತಿಯೊಬ್ಬನ ಹೆಸರನ್ನು ಪ್ರಭಾಕರನ್ ತನ್ನ ಪುತ್ರನಿಗೆ ಇಟ್ಟಿದ್ದು, ಚಾರ್ಲ್ಸ್ 2006ರಲ್ಲಿ ಐರ್ಲೆಂಡ್‌ನಿಂದ ವಾಪಸಾಗಿದ್ದನು. ಏರೋನಾಟಿಕಲ್ ಎಂಜಿನಿಯರಿಂಗ್ ಡಿಗ್ರಿ ಹೊಂದಿರುವ ಚಾರ್ಲ್ಸ್ ಎಲ್‌ಟಿಟಿಇಯ ವಾಯುದಳ ಮತ್ತು ಕಂಪ್ಯೂಟರ್ ಘಟಕವನ್ನು ಮುನ್ನಡೆಸುತ್ತಿದ್ದ. |