ಚುನಾವಣೆ ಪೋಸ್ಟರ್‌ಗಳಲ್ಲಿ ಮಹಾತ್ಮಾ ಗಾಂಧೀಜಿಯ ಚಿತ್ರಗಳನ್ನು ಬಳಸಿದ್ದಕ್ಕಾಗಿ ಡರ್ಬಾನ್‌ನಲ್ಲಿರುವ ಭಾರತೀಯ ಮೂಲದ ಜನರು ಎಎನ್‌ಸಿ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ. ತನ್ನದೇ ಮೌಲ್ಯಗಳು ಮತ್ತು ತತ್ವಗಳ ಆಧಾರದ ಮೇಲೆ ಮತದಾರರನ್ನು ಸೆಳೆಯದಷ್ಟು ಆಡಳಿತಾರೂಢ ಪಕ್ಷ ದಿವಾಳಿಯಾಗಿದೆಯೇ ಎಂದು ಕೆಲವರು ಪ್ರಶ್ನಿಸಿದ್ದಾರೆ.
ಭಾರತೀಯ ಮೂಲದ ಜನರು ವಾಸಿಸುತ್ತಿದ್ದ ಡರ್ಬಾನ್ ಮತ್ತು ಪೀಟರ್‌ಮೆರಿಟ್‌ಬರ್ಗ್ ಪ್ರದೇಶಗಳಲ್ಲಿ ರಾರಾಜಿಸುತ್ತಿದ್ದ, ಮಹಾತ್ಮಾ ಗಾಂಧೀಜಿಯ ಚಿತ್ರವನ್ನು ಹೊಂದಿರುವ ಈ ಪೋಸ್ಟರ್‌ಗಳು ಏಪ್ರಿಲ್ 22ರಂದು ನಡೆಯುವ ಚುನಾವಣೆಯಲ್ಲಿ ಭಾರತೀಯ ಸಮುದಾಯದ ಜನರನ್ನು ತಮ್ಮ ಪಕ್ಷಕ್ಕೆ ಸೆಳೆಯಲು ಎಎನ್‌ಸಿ ಅನುಸರಿಸಿದ ಕಾರ್ಯತಂತ್ರವಾಗಿತ್ತು.
ಈ ವಿವಾದದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಎಎನ್‌ಸಿ ನೀಡಿರದಿದ್ದರೂ, ಮಹಾತ್ಮಾ ಗಾಂಧಿ ಫೀನಿಕ್ಸ್ ಸೆಟಲ್‌ಮೆಂಟ್ ಟ್ರಸ್ಟ್ ಅಧ್ಯಕ್ಷ ಮತ್ತು ಸಂಸತ್ ಸದಸ್ಯ ಮೇವಾಲಾಲ್ ರಾಮ್‌ಗೋಬಿನ್ ಗಾಂಧಿ ಭಿತ್ತಿಚಿತ್ರ ಪ್ರದರ್ಶಿಸಿದ್ದಲ್ಲಿ ತಪ್ಪೇನೂ ಕಾಣಿಸುತ್ತಿಲ್ಲವೆಂದು ನುಡಿದಿದ್ದಾರೆ.ಆದರೆ ನ್ಯಾಷನಲ್ ಎಸ್‌ಎಬಿಸಿ ಬ್ರಾಡ್‌ಕಾಸ್ಟರ್‌ನಲ್ಲಿನ ಟಾಕ್ ಶೋನಲ್ಲಿ ಅನೇಕ ಮಂದಿ ದೂರವಾಣಿ ಕರೆ ಮಾಡಿ ತಮ್ಮ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
'ಹಿಂಸಾತ್ಮಾಕ ಅಪರಾಧಗಳು, ವಂಚನೆ, ಭ್ರಷ್ಟಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಸೇವೆಗಳ ಗುಣಮಟ್ಟ ಕ್ಷೀಣಿಸುತ್ತಿದೆ. ಗಾಂಧಿ ಮತ್ತು ಪ್ರಸಕ್ತ ಎಎನ್‌ಸಿ ನಡುವೆ ಯಾವುದೇ ಸಾಮ್ಯತೆ ಇರುವುದು ತಮಗೆ ಖಚಿತವಿಲ್ಲ' ಎಂದು ಡರ್ಬಾನ್‌ನ ಮೋಲಿ ನಾಯ್ಡು ಎಂಬಾಕೆ ಕರೆ ಮಾಡಿ ಹೇಳಿದ್ದಾರೆ. |