ತಾಲಿಬಾನ್ ಬಳಿಕದ ಆಫ್ಘಾನಿಸ್ತಾನದಲ್ಲಿ ಭಾರತದ ಸಕ್ರಿಯ ಪಾಲ್ಗೊಳ್ಳುವಿಕೆ ಕುರಿತು ಪಾಕಿಸ್ತಾನದ ವೀಟೊ ಅಧಿಕಾರ ಚಲಾವಣೆಗೆ ಅಧ್ಯಕ್ಷ ಬರಾಕ್ ಒಬಾಮಾ ತೆರೆ ಎಳೆದಿದ್ದಾರೆಂದು ದಕ್ಷಿಣ ಏಷ್ಯಾ ಕುರಿತು ಅಮೆರಿಕದ ತಜ್ಞೆಯೊಬ್ಬರು ಬಹಿರಂಗಮಾಡಿದ್ದಾರೆ.
ಆಫ್ಘಾನಿಸ್ತಾನದಲ್ಲಿ ಯಾವುದೇ ರೀತಿಯಲ್ಲಿ ಭಾಗಿಯಾಗಲು ಪಾಕಿಸ್ತಾನ ತೀವ್ರ ಪ್ರತಿರೋಧ ಒಡ್ಡಿದ್ದರಿಂದ ಆಫ್ಘಾನಿಸ್ತಾನದ ಪ್ರಾದೇಶಿಕ ಕಾರ್ಯತಂತ್ರದಲ್ಲಿ ಭಾರತವನ್ನು ಸೇರಿಸುವ ಯಾವುದೇ ಕ್ರಮವನ್ನು ಬುಷ್ ಆಡಳಿತ ಅಕ್ಷರಶಃ ತಪ್ಪಿಸಿತ್ತು ಎಂದು ಜಾರ್ಜ್ ವಾಷಿಂಗ್ಟನ್ ವಿವಿಯ ಸಹಾಯಕ ನಿರ್ದೇಶಕಿ ಆಫ್ಘಾನಿಸ್ತಾನ ಕುರಿತು ಸಂಸತ್ತಿನ ಸಮಿತಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪಾಕಿಸ್ತಾನದ ಭಾವನೆಗಳಿಗೆ ಮಣಿದು ಆಫ್ಘಾನಿಸ್ತಾನದ ರಾಜಕೀಯ ಪ್ರಯತ್ನಗಳಲ್ಲಿ ಭಾರತವನ್ನು ಸೇರಿಸಲು ಅಮೆರಿಕ ಸರ್ಕಾರ ನಿರ್ಬಂಧಿಸಿತ್ತು. ಈ ಸ್ಥಿತಿಗತಿಗಳಿಂದ ಭಾರತ ಅತೃಪ್ತಿಯಿಂದ ಕುದಿಯುತ್ತಿದ್ದರೂ, ಅದಕ್ಕೆ ಬದಲಾಗಿ ಅಭಿವೃದ್ಧಿ ನೆರವಿಗೆ ಚಾಲನೆ ನೀಡಿತ್ತು ಎಂದು ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ವ್ಯವಹಾರ ಉಪಸಮಿತಿಯ ಮುಂದೆ ಅವರು ಸಾಕ್ಷ್ಯ ನುಡಿದಿದ್ದಾರೆ.
ಒಬಾಮಾ ಕಳೆದ ಶುಕ್ರವಾರ ಘೋಷಿಸಿದ ನೂತನ ಯೋಜನೆಯಲ್ಲಿ ಭಾರತ ಭಾಗಿಯಾದ ಅಂತಾರಾಷ್ಟ್ರೀಯ ಸಂಪರ್ಕ ತಂಡದ ಸೇರ್ಪಡೆಯು ಸರಿಯಾದ ದಾರಿಯಲ್ಲಿ ಇಟ್ಟ ಹೆಜ್ಜೆಯೆಂದು ಅವರು ಪ್ರತಿಕ್ರಿಯಿಸಿದ್ದಾರೆ. |