ಭಾರತ-ಪಾಕ್ ಸಂಬಂಧಗಳಲ್ಲಿ ಉದ್ವಿಗ್ನತೆ ಶಮನಕ್ಕೆ ರಾಜತಾಂತ್ರಿಕ ಪ್ರಯತ್ನಗಳನ್ನು ಒಬಾಮಾ ಆಡಳಿತ ಈಗಾಗಲೇ ಮುಂದುವರಿಸಿದೆ ಎಂದು ಕಾಶ್ಮೀರವನ್ನು ಹೆಸರಿಸದೇ ಅಮೆರಿಕದ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.
ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಭಯೋತ್ಪಾದನೆ ವಿರುದ್ಧ ಕದನದ ಯಶಸ್ಸಿಗೆ ಇದು ಮುಖ್ಯಾಂಶವಾಗಿದೆ ಎಂದು ಅವರು ಭಾವಿಸಿದ್ದಾರೆ. ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ವಿಶೇಷ ಅಮೆರಿಕ ಪ್ರತಿನಿಧಿ ರಾಯಭಾರಿ ರಿಚರ್ಡ್ ಹಾಲ್‌ಬ್ರೂಕ್ ಅವರಿಂದ ಈ ಪ್ರಯತ್ನ ಈಗಾಗಲೇ ಆರಂಭವಾಗಿದೆ ಎಂದು ಸೆನೆಟ್‌ನ ಸಶಸ್ತ್ರ ಸೇವೆ ಸಮಿತಿಯ ಎದುರು ಜನರಲ್ ಡೇವಿಡ್ ಎಚ್ ಪೆಟ್ರಾಸ್ ಸಾಕ್ಷ್ಯ ನುಡಿಯುತ್ತಾ ಹೇಳಿದ್ದಾರೆ.
ವಿಶೇಷವಾಗಿ ಕಾಶ್ಮೀರ ವಿಷಯಕ್ಕೆ ಸಂಬಂಧಪಟ್ಟಂತೆ ಭಾರತ-ಪಾಕ್ ನಡುವೆ ತ್ವೇಷಮಯ ವಾತಾವರಣ ಶಮನಕ್ಕೆ ಒಬಾಮಾ ಆಡಳಿತ ಕೈಗೊಂಡ ಪ್ರಯತ್ನಗಳನ್ನು ಕುರಿತು ಸೆನೆಟ್ ಸದಸ್ಯ ಮಾರ್ಕ್ ಉಡಾಲ್ ಪ್ರಶ್ನೆಗೆ ಅವರು ಪ್ರತಿಕ್ರಿಯಿಸುತ್ತಿದ್ದರು.
'ಪಾಕಿಸ್ತಾನದ ಹೆಚ್ಚಿನ ಗಮನವು ಕಾಶ್ಮೀರ ಕಡೆಗಿದೆ. ಕಾಶ್ಮೀರ ವಿವಾದಕ್ಕೆ ಪರಿಹಾರೋಪಾಯ ಹುಡುಕಲು ಭಾರತ ಮತ್ತು ಪಾಕ್‌ಗೆ ಒತ್ತಾಯಿಸುವ ಚರ್ಚೆ ನಡೆದಿದೆಯೇ' ಎಂದು ಉಡಾಲ್ ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಪ್ರಸಕ್ತ ಸನ್ನಿವೇಶದ ಬಗ್ಗೆ ಸಾಕ್ಷ್ಯ ನೀಡಲು ಕರೆದಿದ್ದ ಮೂವರು ಉನ್ನತ ಮಿಲಿಟರಿ ಮತ್ತು ರಕ್ಷಣಾ ಅಧಿಕಾರಿಗಳನ್ನು ಕೇಳಿದರು.
|