ತಾಲಿಬಾನ್ ಜತೆ ಗೌರವಾನ್ವಿತ ಸಂಧಾನ ನಡೆಸುವ ಅಮೆರಿಕದ ಪ್ರಸ್ತಾವನೆಯನ್ನು ತಾಲಿಬಾನ್ ಬಂಡುಕೋರರು ತಿರಸ್ಕರಿಸಿದ್ದು, ಇದೊಂದು ಉನ್ಮತ್ತತೆಯ ಕಲ್ಪನೆಯೆಂದು ಟೀಕಿಸಿದ್ದಾರೆ.
ಆಫ್ಘಾನಿಸ್ತಾನದಲ್ಲಿ ಯುದ್ಧದ ಸಮಾಪ್ತಿಗೆ ವಿದೇಶಿ ಪಡೆಗಳ ವಾಪಸಾತಿ ಮಾತ್ರ ಉಳಿದಿರುವ ದಾರಿಯೆಂದು ಅವರು ಹೇಳಿದ್ದಾರೆ. ತಾಲಿಬಾನ್ ಸೌಮ್ಯವಾದಿ ಬಣವನ್ನು ಸಂಪರ್ಕಿಸುವ ಒಬಾಮಾ ಮಾತನ್ನು ಉಲ್ಲೇಖಿಸಿ, ಈ ಹಿಂದೆ ಕೂಡ ಈ ವಿಷಯವನ್ನು ಪ್ರಸ್ತಾಪಿಸಲಾಗಿತ್ತು ಎಂದು ತಾಲಿಬಾನ್ ವಕ್ತಾರ ಜಬೀಲುಲ್ಲಾ ಮುಜಾಹಿದ್ ಹೇಳಿದ್ದಾನೆ.
'ಅವರು ಸೌಮ್ಯವಾದಿ ತಾಲಿಬಾನಿಗಳನ್ನು ಹುಡುಕಿ ಅವರ ಜತೆ ಮಾತನಾಡುವುದು ಉನ್ಮತ್ತ ಕಲ್ಪನೆ' ಎಂದು ಮುಜಾಹಿದ್ ದೂರವಾಣಿಯಲ್ಲಿ ತಿಳಿಸಿದ್ದಾನೆ. ಏತನ್ಮಧ್ಯೆ, ಸ್ವಾತ್ ಕಣಿವೆಯ ಸುಮಾರು 70 ತಾಲಿಬಾನ್ ಉಗ್ರರು ಪ್ರತಿಪಕ್ಷ ಪಿಎಂಎಲ್-ಕ್ಯೂ ನಾಯಕ ಮತ್ತು ಮಾಜಿ ಫೆಡರಲ್ ಸಚಿವ ಅಮಿರ್ ಮುಖಾಂಗೆ ಸೇರಿದ ಮನೆಯನ್ನು ಸ್ಫೋಟಿಸಿದ್ದಾರೆಂದು ತಿಳಿದುಬಂದಿದ್ದು, ಆ ಸಂದರ್ಭದಲ್ಲಿ ಮುಖಾಂ ಮನೆಯಲ್ಲಿರಲಿಲ್ಲವೆಂದು ತಿಳಿದುಬಂದಿದೆ. |