ಧರ್ಮಬೋಧಕರ ಮಾರುವೇಷದಲ್ಲಿ ಸುಮಾರು 14 ಭಯೋತ್ಪಾದಕರು ಭಯೋತ್ಪಾದನೆ ದಾಳಿ ನಡೆಸುವ ಸಲುವಾಗಿ ಲಾಹೋರ್ ಮತ್ತು ಫೆಡರಲ್ ರಾಜಧಾನಿಗೆ ನುಸುಳಿದ್ದಾರೆಂದು ಪಾಕಿಸ್ತಾನ ಗುಪ್ತಚರ ಸಂಸ್ಥೆಗಳು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ.
ರಾಷ್ಟ್ರಾದ್ಯಂತ ಇನ್ನಷ್ಟು ದಾಳಿಗಳನ್ನು ನಡೆಸಲು ತಮ್ಮ ಸಂಘಟನೆ ಯೋಜಿಸಿದೆ ಎಂದು ತಾಲಿಬಾನ್ ಕಮಾಂಡರ್ ಬೈತುಲ್ಲಾ ಮಸೂದ್ ತಿಳಿಸಿದ ಕೆಲವೇ ದಿನಗಳಲ್ಲಿ ಈ ಎಚ್ಚರಿಕೆ ಹೊರಬಿದ್ದಿದೆ.
ಪ್ರಮುಖ ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳು, ಹೊಟೆಲ್‌ಗಳು ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಭಯೋತ್ಪಾದಕರ ದಾಳಿ ತಡೆಯಲು ಬಿಗಿ ಭದ್ರತೆ ನಿಯೋಜಿಸುವಂತೆ ಗುಪ್ತಚರ ಅಧಿಕಾರಿಗಳು ಕಾನೂನು ಜಾರಿ ಸಂಸ್ಥೆಗಳಿಗೆ ಸೂಚಿಸಿದ್ದಾರೆಂದು ಟಿವಿ ಚಾನೆಲ್‍ವೊಂದು ವರದಿ ಮಾಡಿದೆ.
ಲಾಹೋರ್‌ನಲ್ಲಿ ಪೊಲೀಸ್ ತರಬೇತಿ ಶಿಬಿರದ ಮೇಲೆ ದಾಳಿ ನಡೆಸಿದ ಮಾದರಿಯಲ್ಲೇ ವಾಯವ್ಯ ಗಡಿ ಪ್ರಾಂತ್ಯದ ಸರ್ಕಾರಿ ನೆಲೆಗಳ ಮೇಲೆ ದಾಳಿ ನಡೆಸಲು 7 ಆತ್ಮಾಹುತಿ ಬಾಂಬರ್‌ಗಳು ಯೋಜಿಸಿದ್ದಾರೆಂದು ಭದ್ರತಾ ಸಂಸ್ಥೆಗಳಿಗೆ ಎಚ್ಚರಿಕೆ ನೀಡಲಾಗಿದೆ.
7 ಮಂದಿ ಆತ್ಮಾಹುತಿ ಬಾಂಬರ್‌ಗಳು ದಾಳಿ ನಡೆಸಲು ಪೇಶಾವರ ಅಥವಾ ಬೇರಾವುದೇ ಜಿಲ್ಲೆಯ ಗುರಿಗಳನ್ನು ಹುಡುಕುತ್ತಿದ್ದಾರೆಂದು ಗುಪ್ತಚರ ವರದಿ ತಿಳಿಸಿರುವುದಾಗಿ ಸರ್ಕಾರಿ ಅಧಿಕಾರಿ ಹೇಳಿದ್ದಾರೆ.ಅಮೆರಿಕದ ಡ್ರೋನ್ ವಿಮಾನಗಳು ಬುಡಕಟ್ಟು ಪ್ರದೇಶಗಳ ಮೇಲೆ ದಾಳಿಗೆ ಪ್ರತೀಕಾರವಾಗಿ ಇನ್ನಷ್ಟು ಭಯೋತ್ಪಾದಕ ದಾಳಿಗಳನ್ನು ನಡೆಸುವುದಾಗಿ ತಾಲಿಬಾನ್ ಮುಖ್ಯಸ್ಥ ಬೈತುಲ್ಲ ಮಸೂದ್ ಮಂಗಳವಾರ ತಿಳಿಸಿದ್ದಾನೆ. |