ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ಗಡಿಪ್ರದೇಶಗಳಿಂದ ನಡೆಸಲಾಗುತ್ತಿರುವ ಭಯೋತ್ಪಾದನೆ ನಿಗ್ರಹಕ್ಕೆ ಸಹಕಾರ ಚುರುಕುಗೊಳಿಸಲು ಭಾರತ ಮತ್ತು ಅಮೆರಿಕ ಒಪ್ಪಿಕೊಂಡಿವೆ. ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮತ್ತು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಭೇಟಿ ಬಳಿಕ ಈ ಒಪ್ಪಂದ ಮಾಡಿಕೊಳ್ಳಲಾಗಿದೆ.
ಲಂಡನ್‌ನಲ್ಲಿ ಗುರುವಾರ ಜಿ-20 ಶೃಂಗಸಭೆಯ ನೇಪಥ್ಯದಲ್ಲಿ ನಡೆದ ಭೇಟಿಯಲ್ಲಿ ಉಭಯ ನಾಯಕರು ಭಯೋತ್ಪಾದನೆ ನಿಗ್ರಹ ಕ್ಷಿಪ್ರವಾಗಿ ಕೈಗೊಳ್ಳುವ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದರು.
"ನಾವು ಭಯೋತ್ಪಾದನೆ ವಿಷಯವನ್ನು ಚರ್ಚಿಸಿದೆವು. ಪಾಕಿಸ್ತಾನದಿಂದ ಹರಿದುಬರುವ ಭಯೋತ್ಪಾದನೆ ವಿಷಯವನ್ನು ಮಾತ್ರ ನಾವು ಚರ್ಚಿಸಲಿಲ್ಲ. ನಾವು ಭಯೋತ್ಪಾದನೆಯನ್ನು ಪರಿಣಾಮಕಾರಿಯಾಗಿ ನಿಗ್ರಹಿಸಲು ಸಂಘಟಿತರಾಗುವುದು ಹೇಗೆಂದು ಸಹಕಾರದ ಮನೋಭಾವದಿಂದ ಚರ್ಚಿಸಿದೆವು" ಎಂದು ಒಬಾಮಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಅಣ್ವಸ್ತ್ರ ಯುಗದಲ್ಲಿ ಭಾರತ ಮತ್ತು ಪಾಕಿಸ್ತಾನ ಉಭಯ ರಾಷ್ಟ್ರಗಳಿಗೂ ಬಡತನ ಶತ್ರುವಾಗಿರುವಾಗ ಅವೆರಡು ರಾಷ್ಟ್ರಗಳ ನಡುವೆ ಪರಿಣಾಮಕಾರಿ ಮಾತುಕತೆ ನಡೆದರೆ ಅದು ಅರ್ಥಪೂರ್ಣವಾಗಿರುತ್ತದೆಂದು ತಾವು ಚರ್ಚಿಸಿದ್ದಾಗಿ ಒಬಾಮಾ ತಿಳಿಸಿದರು.
ಚರ್ಚೆಯ ಕಾಲದಲ್ಲಿ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ಬೆಳವಣಿಗೆಗಳು ಪ್ರಮುಖವಾಗಿ ಪ್ರಸ್ತಾಪವಾಯಿತು. ಮುಂಬೈ ದಾಳಿಯ ಕಾರಣಕರ್ತರಿಗೆ ಶಿಕ್ಷೆ ವಿಧಿಸಲು ಪಾಕಿಸ್ತಾನ ಸಂಪೂರ್ಣ ಪ್ರಾಮಾಣಿಕತೆ ತೋರಿಸಿದರೆ ಉಭಯ ರಾಷ್ಟ್ರಗಳ ನಡುವೆ ಮಾತುಕತೆ ನಡೆಸಬಹುದೆಂದು ಮನಮೋಹನ್ ಸಿಂಗ್ ಮನದಟ್ಟು ಮಾಡಿದ್ದಾರೆಂದು ತಿಳಿದುಬಂದಿದೆ. |