ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಭಾರತದ ಪ್ರಧಾನಮಂತ್ರಿ ಮನಮೋಹನ್ ತಮ್ಮ ಪ್ರಥಮ ಭೇಟಿಯಲ್ಲಿ ಒಬ್ಬರನ್ನೊಬ್ಬರು ಹೊಗಳಿಕೊಂಡು 'ಪರಸ್ಪರ ಪ್ರಶಂಸೆಯ ಕೂಟ'ದಲ್ಲಿರುವಂತೆ ಕಂಡುಬಂದರು.
48 ವರ್ಷ ಪ್ರಾಯದ ನೂತನ ಅಧ್ಯಕ್ಷ ಒಬಾಮಾ ಅವರು, ಸಿಂಗ್ ಅವರನ್ನು ಬುದ್ಧಿವಂತ ಮತ್ತು ವಿಸ್ಮಯಕಾರಿ ವ್ಯಕ್ತಿಯೆಂದು ಬಣ್ಣಿಸಿದರು. ಕಳೆದ ರಾತ್ರಿ ಜಿ-20 ಶೃಂಗಸಭೆಯ ನೇಪಥ್ಯದಲ್ಲಿ ಉಭಯನಾಯಕರು ಭೇಟಿ ಮಾಡಿದಾಗ ಪರಸ್ಪರ ಹೊಗಳಿಕೆಯ ಸುರಿಮಳೆ ಸುರಿಸಿದರು.
ಅರ್ಥಶಾಸ್ತ್ರಜ್ಞ-ಪ್ರಧಾನಿಯ ವ್ಯಕ್ತಿತ್ವದ ಬಗ್ಗೆ ಮೆಚ್ಚುಗೆಯ ಮಾತಾಡಿದ ಒಬಾಮಾ, ನಿಮ್ಮ ಪ್ರಧಾನಮಂತ್ರಿ ವಿಸ್ಮಯಕರ, ಬುದ್ಧಿವಂತ ಮತ್ತು ಸೌಜನ್ಯಶೀಲ ವ್ಯಕ್ತಿ ಎಂದು ಮೊದಲಿಗೆ ತಾವು ಹೇಳುವುದಾಗಿ ಒಬಾಮಾ ನುಡಿದರು. ಪ್ರಧಾನಿಯಾಗುವುದಕ್ಕಿಂತ ಮುಂಚಿತವಾಗಿ ಅಸಾಮಾನ್ಯ ಆರ್ಥಿಕ ಪ್ರಗತಿಯ ಹಾದಿಯಲ್ಲಿ ಸಾಗಲು ಮಾರ್ಗದರ್ಶಿಯಾಗುವ ಮೂಲಕ ಅದ್ಭುತ ಕೆಲಸ ಮಾಡಿದ್ದಾರೆಂದು ಸಿಂಗ್ ಅವರನ್ನು ಶ್ಲಾಘಿಸಿದರು.
ಸಿಂಗ್ ಅವರು ಭಾರತದ ಆರ್ಥಿಕ ಉದಾರೀಕರಣದಲ್ಲಿ ಆದ್ಯ ಪ್ರವರ್ತಕ ಪಾತ್ರ ವಹಿಸಿದ್ದನ್ನು ಉಲ್ಲೇಖಿಸಿ ಒಬಾಮ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಸಿಂಗ್ ಕೂಡ ಒಬಾಮಾರಿಗೆ 'ನೀವು ಭಾರತದಲ್ಲಿ ಅತ್ಯಂತ ಪ್ರೀತಿಪಾತ್ರ ಮತ್ತು ಗೌರವಾನ್ವಿತ ವ್ಯಕ್ತಿ' ಎಂದು ಹೊಗಳಿದ್ದಾರೆ. |