ತಮಿಳು ವ್ಯಾಘ್ರ ಬಂಡುಕೋರರ ಜತೆ ತೀವ್ರ ಕದನ ಮಾಡುತ್ತಿರುವ ಶ್ರೀಲಂಕಾ ಭದ್ರತಾಪಡೆಗಳು ಮುಖ್ಯ ಗ್ರಾಮವೊಂದನ್ನು ಕೈವಶ ಮಾಡಿಕೊಂಡಿದ್ದು, ಕನಿಷ್ಠ 44 ಬಂಡುಕೋರರು ಹತರಾಗಿದ್ದಾರೆಂದು ಮಿಲಿಟರಿ ವಕ್ತಾರ ತಿಳಿಸಿದರು.
ಬಂಡುಕೋರರು ಆಯಕಟ್ಟಿನ ನೆಲೆಯಾಗಿ ಬಳಸುತ್ತಿದ್ದ ಆನಂದಪುರಂಗೆ ತಲುಪಿವೆ ಬ್ರಿಗೇಡಿಯರ್ ಉದಯ ನಾನಯಕ್ಕರಾ ತಿಳಿಸಿದ್ದಾರೆ. ಶ್ರೀಲಂಕಾ ಪಡೆಗಳಿಂದ ಗ್ರಾಮದ ಸ್ವಾಧೀನ ತಪ್ಪಿಸಲು ಎಲ್‌ಟಿಟಿಇ ತೀವ್ರ ಪ್ರತಿರೋಧ ಒಡ್ಡಿತೆಂದು ವಕ್ತಾರ ತಿಳಿಸಿದರು.ಗುರುವಾರದ ಹೋರಾಟದಲ್ಲಿ ಇಬ್ಬರು ಹಿರಿಯ ಎಲ್‌ಟಿಟಿಇ ನಾಯಕರು ಸೇರಿದಂತೆ 44 ಬಂಡುಕೋರರು ಸತ್ತಿರುವುದಾಗಿ ಅವರು ಹೇಳಿದರು.
ದ್ವೀಪದ ಈಶಾನ್ಯಕ್ಕೆ ತಮ್ಮನ್ನು 20 ಚದರ ಕಿಮೀ ಜಾಗದೊಳಕ್ಕೆ ದೂಡಿದ ಮಿಲಿಟರಿ ಆಕ್ರಮಣದ ವಿರುದ್ಧ ತಮಿಳು ಗೆರಿಲ್ಲಾಗಳು ತೀವ್ರ ಹೋರಾಟ ನಡೆಸಿದ್ದಾರೆ. ಏತನ್ಮಧ್ಯೆ, ಯುದ್ಧವಲಯದಲ್ಲಿ 150,000 ನಾಗರಿಕರು ಸಿಕ್ಕಿಬಿದ್ದಿದ್ದಾರೆಂದು ವಿಶ್ವಸಂಸ್ಥೆ ಮತ್ತು ವಿದೇಶಿ ನೆರವು ಸಂಘಟನೆಗಳು ತಿಳಿಸಿವೆ. ಆದರೆ ಯುದ್ಧವಲಯದಲ್ಲಿ ಸಿಕ್ಕಿಬಿದ್ದಿರುವವರ ಅಂಕಿಅಂಶವು ಅದರ ಅರ್ಧಕ್ಕಿಂತ ಕಡಿಮೆ ಎಂದು ಶ್ರೀಲಂಕಾ ಸರ್ಕಾರ ಹೇಳುತ್ತಿದೆ.
1990ರಲ್ಲಿ ಅಧಿಕಾರದ ಉತ್ತುಂಗದಲ್ಲಿದ್ದಾಗ, ವ್ಯಾಘ್ರಗಳು ಶ್ರೀಲಂಕಾದ ಒಟ್ಟು ಪ್ರದೇಶದಲ್ಲಿ ಮೂರನೇ ಒಂದು ಭಾಗದಷ್ಟು ನಿಯಂತ್ರಣ ಹೊಂದಿದ್ದು, ಸ್ವತಂತ್ರ ತಮಿಳು ತಾಯಿನಾಡಿಗೆ ಒತ್ತಾಯಿಸುತ್ತಿದ್ದರು. |