ವಿಮಾನಗಳ ಸಮೂಹದ ಒಡೆಯನಾಗಿ 'ಲಾರ್ಡ್ ಆಫ್ ಸ್ಕೈಯ್ಸ್' ಎಂದೇ ಹೆಸರಾಗಿದ್ದ ಮಾರಕ ಮಾದಕದ್ರವ್ಯ ಜಾಲದ ದೊರೆಯನ್ನು ಮೆಕ್ಸಿಕೊ ಅಧಿಕಾರಿಗಳು ಬಂಧಿಸಿದ್ದಾರೆ.
ಜಾರೆಜ್ ಮಾದಕದ್ರವ್ಯ ಜಾಲದ ಸಂಸ್ಥಾಪಕ ಅಮಾಡೊ ಕೆರಿಲ್ಲೊ ಫುಂಟೆಸ್ ಪುತ್ರನಾದ ವಿಸೆಂಟೊ ಕ್ಯಾರಿಲ್ಲೊ ಲೆವ್ಯಾನನ್ನು ಪೊಲೀಸರು ಮತ್ತು ಅಧಿಕಾರಿಗಳ ಸಂಘಟಿತ ಪ್ರಯತ್ನದಿಂದ ಉದ್ಯಾನವೊಂದರಿಂದ ಬಂಧಿಸಲಾಯಿತು ಎಂದು ಫೆಡರಲ್ ಪೊಲೀಸ್ ಆಯುಕ್ತ ರೋಡ್ರಿಗೊ ಎಸ್ಪಾರ್ಜಾ ವರದಿಗಾರರಿಗೆ ತಿಳಿಸಿದರು.
32ರ ಪ್ರಾಯದ ಲೆವ್ಯಾ ತಲೆಗೆ 3.1 ಮಿಲಿಯ ಡಾಲರ್ ಘೋಷಿಸಲಾಗಿದ್ದು, ಮಾದಕದ್ರವ್ಯ ಜಾಲದ ದೊರೆ ಆಲ್‌ಜೆಡ್ರೊ ಪೆರಾಲ್ಟಾ ಅಲ್ವಾರೆಜ್ ಎಂಬ ಹೆಸರಿನಲ್ಲಿ ಉದ್ಯಮಿಯಂತೆ ಸೋಗು ಹಾಕಿದ್ದನೆಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಉನ್ನತ ಶಿಕ್ಷಣ ಹೊಂದಿದ ಲೆವ್ಯಾ ಜಾರೆಜ್ ಜಾಲದ ಉತ್ತರಾಧಿಕಾರಿಯಾಗಿದ್ದು, ಅದರ ನಿರ್ವಹಣೆಗೆ ಮತ್ತು ಅಕ್ರಮ ಸಂಪನ್ಮೂಲಗಳನ್ನು ಬಚ್ಚಿಟ್ಟಿದ್ದಕ್ಕೆ ಜವಾಬ್ದಾರಿಯಾಗಿದ್ದಾನೆ.
ಮಾದಕದದ್ರವ್ಯ ಸಂಬಂಧಿತ ಹಿಂಸಾಚಾರಗಳಿಂದ ಮೆಕ್ಸಿಕೊ ತತ್ತರಿಸಿದ್ದು, ಪ್ರಮುಖ ಜಾಲಗಳು ಕಳ್ಳಸಾಗಣೆ ಮತ್ತು ವಿತರಣೆ ಮಾರ್ಗಗಳ ಮೇಲೆ ನಿಯಂತ್ರಣ ಹೊಂದಲು ಪರಸ್ಪರ ಕಾದಾಟ ಮತ್ತು ಭದ್ರತಾ ಪಡೆಗಳ ಜತೆ ಹೋರಾಟಕ್ಕೆ ಇಳಿದಿವೆ. ಮಾದಕಜಾಲದ ಬಾಡಿಗೆಹಂತಕರು 2007ರಲ್ಲಿ 2,700 ಜನರನ್ನು ಹತ್ಯೆ ಮಾಡಿದ್ದರೆ, 2006ರಲ್ಲಿ 1500 ಮತ್ತು 2008ರಲ್ಲಿ 6000ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿದ್ದಾರೆ. |