ಉತ್ತರ ಕೊರಿಯ ಉಡಾಯಿಸಲಿರುವ ಉಪಗ್ರಹಕ್ಕೆ ಗುಂಡಿಕ್ಕುವ ಪ್ರಯತ್ನವನ್ನು ಜಪಾನ್ ಮಾಡಿದರೆ ಜಪಾನ್ ಮೇಲೆ ದಾಳಿ ಮಾಡುವುದಾಗಿ ಉತ್ತರಕೊರಿಯ ಮಿಲಿಟರಿ ಎಚ್ಚರಿಸಿದೆ.
ನಮ್ಮ ಉಪಗ್ರಹವನ್ನು ಶೂಟ್ ಮಾಡುವ ಸ್ವಲ್ಪ ಲಕ್ಷಣಗಳನ್ನು ವೈರಿ ಪಡೆಗಳು ತೋರಿಸಿದರೆ ಪ್ರತಿದಾಳಿ ನಡೆಸಲು ನಮ್ಮ ಕ್ರಾಂತಿಕಾರಿ ಸೇನಾ ಪಡೆ ಹಿಂಜರಿಯುವುದಿಲ್ಲ ಎಂದು ಜಂಟಿ ಸಿಬ್ಬಂದಿ ಮುಖ್ಯಸ್ಥರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಪಾನ್ ಶಾಂತಿಯುತ ಉದ್ದೇಶದ ಉಪಗ್ರಹಕ್ಕೆ ವಿವೇಚನೆಯಿಲ್ಲದೇ ಗುಂಡಿಕ್ಕಿದರೆ ಸೇನೆಯು ಕ್ಷಿಪಣಿ ನಿರೋಧಕ ಶಸ್ತ್ರದ ವಿರುದ್ಧ ಮತ್ತು ಜಪಾನ್‌ನ ಮುಖ್ಯ ನೆಲೆಗಳ ವಿರುದ್ಧ ಪ್ರತಿದಾಳಿ ನಡೆಸುವ ಮೂಲಕ ಬೆಂಕಿಯ ಮಳೆ ಸುರಿಸುತ್ತದೆಂದು ಉತ್ತರ ಕೊರಿಯ ಎಚ್ಚರಿಸಿದೆ.
ಕಮ್ಯುನಿಸ್ಟ್ ರಾಷ್ಟ್ರವು ಶಾಂತಿಯುತ ಬಾಹ್ಯಾಕಾಶ ಕಾರ್ಯಕ್ರಮದ ಭಾಗವಾಗಿ ಏ.4-8ನೇ ನಡುವೆ ಸಂಪರ್ಕ ಉಪಗ್ರಹ ಉಡಾಯಿಸುವುದಾಗಿ ಪ್ರಕಟಿಸಿದೆ. ಆದರೆ ಉತ್ತರಕೊರಿಯ ಟೈಪೆಡೊಂಗ್-2 ಖಂಡಾಂತರ ಕ್ಷಿಪಣಿ ಪರೀಕ್ಷೆ ಸಲುವಾಗಿ ಉಪಗ್ರಹ ಉಡಾವಣೆ ಒಂದು ನೆಪವೆಂದು ಅಮೆರಿಕ ಮತ್ತು ಏಷ್ಯ ಮಿತ್ರ ರಾಷ್ಟ್ರಗಳು ಹೇಳಿದ್ದು, ವಿಶ್ವಸಂಸ್ಥೆ ನಿರ್ಣಯಗಳನ್ನು ಉಲ್ಲಂಘಿಸಿ, ಅಲಾಸ್ಕ ಅಥವಾ ಹವಾಯಿಗೆ ಮುಟ್ಟಲಿದೆಯೆಂದು ಪ್ರತಿಪಾದಿಸಿದ್ದಾರೆ. |