ಆಫ್ಘಾನಿಸ್ತಾನದ ಅಧ್ಯಕ್ಷ ಹಮೀದ್ ಕರ್ಜೈ ತಂದಿರುವ ನೂತನ ಕಾನೂನು ಅಮೆರಿಕ ವಿದೇಶಾಂಗ ಇಲಾಖೆಯಲ್ಲಿ ಕೋಲಾಹಲ ಮೂಡಿಸಿದೆ. ನೂತನ ಕಾಯಿದೆಯ ಪ್ರಕಾರ ಶಿಯಾ ಜನರು ತಮ್ಮ ಪತ್ನಿಯರ ಜತೆ ನಾಲ್ಕು ದಿನಕ್ಕೊಮ್ಮೆ ಲೈಂಗಿಕತೆಗೆ ಒತ್ತಾಯಿಸಬಹುದು ಮತ್ತು ಅವರು ಮನೆಯಿಂದ ಹೊರಕ್ಕೆ ತೆರಳದಂತೆ ನಿರ್ಬಂಧ ಹೇರಬಹುದು.
ನೂತನ ಶಿಯಾ ಕುಟುಂಬದ ಕಾಯಿದೆಯ ಪ್ರಕಾರ ವಿವಾಹಿತ ದಂಪತಿ ನಡುವೆ ಲೈಂಗಿಕ ಸಂಬಂಧಕ್ಕೆ ಸಮ್ಮತಿ ಪಡೆಯುವ ಅಗತ್ಯವಿಲ್ಲ. ಈ ಕಾಯಿದೆ ಬಾಲ್ಯವಿವಾಹಕ್ಕೆ ಅನುಮೋದನೆ ನೀಡುತ್ತದೆ ಮತ್ತು ಮಹಿಳೆ ಮನೆಯಿಂದ ಹೊರಕ್ಕೆ ತೆರಳದಂತೆ ನಿರ್ಬಂಧಿಸುತ್ತದೆ.
ತಾಲಿಬಾನ್ ಆಡಳಿತಕ್ಕಿಂತ ಕೆಟ್ಟದಾದ ಈ ಕಾನೂನನ್ನು ರದ್ದು ಮಾಡಲು ಅಮೆರಿಕ ವಿದೇಶಾಂಗ ಇಲಾಖೆ ಶತಾಯಗತಾಯ ಪ್ರಯತ್ನಿಸುತ್ತಿದೆಯೆಂದು ಡೇಲಿ ನ್ಯೂಸ್ ವರದಿ ಮಾಡಿದೆ. ಇದೊಂದು ಕಾನೂನುಬದ್ಧ ಅತ್ಯಾಚಾರ ಎಂದು ಕೆಲವರು ಬಣ್ಣಿಸಿರುವ ಕಾಯಿದೆಯನ್ನು ರದ್ದುಮಾಡುವಂತೆ ಮಂಗಳವಾರ ಹೇಗ್‌ನಲ್ಲಿ ಹಿಲರಿ ಕ್ಲಿಂಟನ್, ಕರ್ಜೈ ಖಾಸಗಿ ಭೇಟಿಯಾದಾಗ ಕ್ಲಿಂಟನ್ ಒತ್ತಾಯಿಸಿದ್ದಾರೆಯೇ ಎಂಬ ಪ್ರಶ್ನೆ ಬಗ್ಗೆ ವಿದೇಶಾಂಗ ಇಲಾಖೆ ವಕ್ತಾರ ವುಡ್ ಏನನ್ನೂ ತಿಳಿಸಿಲ್ಲ.ಅವರು ಕಾಯಿದೆ ರದ್ದಿಗೆ ಒತ್ತಾಯಿಸಿರಬಹುದು.
ತಮಗೆ ಗೊತ್ತಿಲ್ಲ. ಕಾಯಿದೆಗೆ ಸಂಬಂಧಿಸಿದಂತೆ ನಮ್ಮ ಅಭಿಪ್ರಾಯದ ಬಗ್ಗೆ ಅಧ್ಯಕ್ಷ ಕರ್ಜೈಗೆ ಚೆನ್ನಾಗಿ ಗೊತ್ತಿದೆ ಎಂದು ವುಡ್ ಹೇಳಿದ್ದಾರೆ. ಕಾಯಿದೆ ಈವರೆಗೆ ಪ್ರಕಟವಾಗಿರದಿದ್ದರೂ ವಿಶ್ವಸಂಸ್ಥೆ ಏಜನ್ಸಿಯೊಂದು ಬಹಿರಂಗ ಮಾಡಿದ್ದು, ಶಿಯಾ ಮಹಿಳೆ ಮನೆಯಿಂದ ಹೊರಕ್ಕೆ ತೆರಳಬೇಕಾದರೆ ಪತಿಯ ಅನುಮತಿ ಪಡೆಯಬೇಕು.
ಕಾಯಿದೆಯ ಪ್ರಕಾರ, ವಿಧೇಯತೆ, ಲೈಂಗಿಕ ಸಂಬಂಧಕ್ಕೆ ಸಿದ್ಧವಾಗಿರುವುದು ಮತ್ತು ಪತಿಯ ಅನುಮತಿಯಿಲ್ಲದೇ ಮನೆಯಿಂದ ಹೊರಕ್ಕೆ ತೆರಳದಿರುವುದು ಪತ್ನಿಯ ಕರ್ತವ್ಯಗಳು ಎಂದು ಕಾಯಿದೆಯಲ್ಲಿ ತಿಳಿಸಿದೆ. ಅದೇ ಗಳಿಗೆಯಲ್ಲಿ ಲೈಂಗಿಕ ಉಪೇಕ್ಷೆಯಿಂದ ಶಿಯಾ ಮಹಿಳೆಯರನ್ನು ರಕ್ಷಿಸುವ ಪ್ರಯತ್ನವನ್ನು ಕಾನೂನಿನಲ್ಲಿ ಮಾಡಲಾಗಿದ್ದು, ನಾಲ್ಕು ತಿಂಗಳಿಗೊಮ್ಮೆಯಾದರೂ ಪತ್ನಿಯ ಜತೆ ಸಂಬಂಧ ಹೊಂದಬೇಕೆಂದು ತಿಳಿಸಲಾಗಿದೆ. |