ಬುರ್ಖಾಧಾರಿ ಬಾಲಕಿಯೊಬ್ಬಳಿಗೆ ತಾಲಿಬಾನ್ ಹೋರಾಟಗಾರರ ಚಾಟಿಯಿಂದ ಮೈಮೇಲೆ ಬೀಸುತ್ತಿದ್ದರೆ ಬಾಲಕಿ ನೋವಿನಿಂದ ಗಟ್ಟಿಯಾಗಿ ಚೀರುವ 2 ನಿಮಿಷಗಳ ವಿಡಿಯೋ ಚಿತ್ರಣವನ್ನು ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿಯಲಾಗಿದೆ.
ಪರಪುರುಷನೊಬ್ಬನ ಜತೆ ಮನೆಯಿಂದ ಹೊರಕ್ಕೆ ಬಂದಿದ್ದು ಆಕೆ ಮಾಡಿದ 'ಘೋರ' ತಪ್ಪು. ನೆಲದ ಮೇಲೆ ತಲೆಕೆಳಗೆ ಮಾಡಿಕೊಂಡು ಬಾಲಕಿ ಕುಳಿತಿದ್ದಾಳೆ. ಇಬ್ಬರು ವ್ಯಕ್ತಿಗಳು ಅವಳ ಕೈಗಳನ್ನು ಹಿಡಿದಿದ್ದರೆ ಮೂರನೇ ವ್ಯಕ್ತಿ ಅವಳ ಕಾಲನ್ನು ಹಿಡಿದಿದ್ದಾನೆ. ಕಪ್ಪು ನಿಲುವಂಗಿ ಧರಿಸಿದ್ದ, ಗಡ್ಡಧಾರಿ ತಾಲಿಬಾನ್ ಹೋರಾಟಗಾರ ಆಕೆಯ ಮೇಲೆ ಮತ್ತೆ ಮತ್ತೆ ಚಾಟಿಯಿಂದ ಥಳಿಸಿದ ಎಂದು ಗಾರ್ಡಿಯನ್ ವರದಿ ಮಾಡಿದೆ.
ಪಾಸ್ತೂನ್ ಸಾಕ್ಷ್ಯಚಿತ್ರ ನಿರ್ಮಾಪಕ ಸಮಾರ್ ಮಿನಾಲ್ಲಾ ಮೂಲಕ ತಾನು ವಿಡಿಯೊ ಸ್ವೀಕರಿಸಿದ್ದಾಗಿ ಸುದ್ದಿಪತ್ರಿಕೆ ವರದಿ ಮಾಡಿದೆ. ಚಾವಟಿಯಿಂದ ಮೈಮೇಲೆ ಬಾಸುಂಡೆ ಬರುವಂತೆ ಹೊಡೆಯುತ್ತಿದ್ದರೆ ದಯವಿಟ್ಟು ನಿಲ್ಲಿಸಿ ಎಂದು ಬಾಲಕಿ ಬೇಡುತ್ತ, ಹೊಡೆಯುವುದನ್ನು ನಿಲ್ಲಿಸಿ ಅಥವಾ ಕೊಂದುಹಾಕಿ ಎಂದು ಆರ್ತನಾದ ಮಾಡಿದ್ದನ್ನು ವಿಡಿಯೊದಲ್ಲಿ ಚಿತ್ರಿಸಲಾಗಿದೆ.
34 ಛಡಿಏಟುಗಳು ಬಿದ್ದ ಬಳಿಕ ಶಿಕ್ಷೆಯನ್ನು ನಿಲ್ಲಿಸಲಾಯಿತು ಮತ್ತು ಅಳುತ್ತಿದ್ದ ಬಾಲಕಿಯನ್ನು ಕಲ್ಲಿನ ಕಟ್ಟಡದೊಳಕ್ಕೆ ಒಯ್ಯಲಾಯಿತು.'ಪತಿಯಲ್ಲದ ಪರಪುರುಷನೊಂದಿಗೆ ಆಕೆ ಮನೆಯಿಂದ ಹೊರಕ್ಕೆ ಬಂದಳು. ಹೆಣ್ಣುಮಕ್ಕಳು ದಾಟದ ಕೆಲವು ಗಡಿಗಳಿವೆಯಾದ್ದರಿಂದ ಆಕೆಗೆ ಶಿಕ್ಷಿಸಲಾಯಿತು' ಎಂದು ತಾಲಿಬಾನ್ ವಕ್ತಾರ ಮುಸ್ಲಿಂ ಖಾನ್ ತಿಳಿಸಿದ್ದಾನೆ.
ಈ ವಿಡಿಯೋವನ್ನು ವ್ಯಾಪಕ ಪ್ರಸಾರ ಮಾಡಲಾಯಿತು. ಏಕೆಂದರೆ ಜನರು ಕಣ್ಣಾರೆ ವಿಡಿಯೊ ನೋಡಬೇಕೆಂದು ತಾಲಿಬಾನ್ ಬಯಸಿದೆ. ಶಾಂತಿ ಒಪ್ಪಂದದ ಬಳಿಕ ಇದು ಸಂಭವಿಸಿದ್ದು,ಅವರು ನಂಬಿರುವ ಸಿದ್ಧಾಂತಕ್ಕೆ ತಕ್ಕನಾಗಿದೆ ಎಂದು ಸುದ್ದಿಪತ್ರಿಕೆ ತಿಳಿಸಿದೆ.ಶಾಂತಿ ಒಪ್ಪಂದದ ರೀತ್ಯ ತಾಲಿಬಾನ್ ತಮ್ಮ ಷರಿಯತ್ ಇಸ್ಲಾಮಿಕ್ ಕಾನೂನನ್ನು ಸ್ವಾತ್‌ನ 60,000 ಜನರು ಮತ್ತು ನೆರೆಯ 7 ಜಿಲ್ಲೆಗಳ ಮೇಲೆ ಹೇರಲು ಮುಕ್ತ ಸ್ವಾತಂತ್ರ್ಯ ನೀಡುತ್ತದೆ.
ತಾಲಿಬಾನ್ ಪರ ಧರ್ಮಗುರು ಮೌಲಾನಾ ಸೂಫಿ ಮಹಮದ್ ಜತೆ ಸಹಿ ಹಾಕಲಾದ ಒಪ್ಪಂದದ ಅನ್ವಯ ಇಸ್ಲಾಮಿಕ್ ಕೋರ್ಟ್ ಸ್ಥಾಪನೆ, ಸಂಗೀತಕ್ಕೆ ನಿಷೇಧ, ಸ್ವಾತ್ ಕಣಿವೆಯಿಂದ ವೇಶ್ಯೆಯರು, ತಲೆಹಿಡುಕರ ಉಚ್ಚಾಟನೆ, ಪ್ರಾರ್ಥನೆ ಸಮಯದಲ್ಲಿ ವ್ಯವಹಾರ ಸ್ಥಗಿತ, ಅಶ್ಲೀಲತೆ ವಿರುದ್ಧ ಆಂದೋಳನ ಸೇರಿದೆ. |