ಸಮುದಾಯ ಕೇಂದ್ರದ ಹಿಂದಿನ ಬಾಗಿಲಿಗೆ ತನ್ನ ಕಾರನ್ನು ಅಡ್ಡವಾಗಿ ನಿಲ್ಲಿಸಿದ ಬಂದೂಕುಧಾರಿಯೊಬ್ಬ, ಪೌರತ್ವ ತರಗತಿಗೆ ಹಾಜರಾಗಿದ್ದ ವಲಸೆಗಾರರಿಂದ ತುಂಬಿದ್ದ ಕೋಣೆಯಲ್ಲಿ ಒಂದೇ ಸಮನೆ ಗುಂಡು ಹಾರಿಸಿ 13 ಜನರನ್ನು ಹತ್ಯೆ ಮಾಡಿದ ಬಳಿಕ ಸ್ವತಃ ಆತ್ಮಹತ್ಯೆ ಮಾಡಿಕೊಂಡ ಭೀಕರ ಘಟನೆ ಶುಕ್ರವಾರ ಸಂಭವಿಸಿದೆ. ಹತ್ಯಾಕಾಂಡಕ್ಕೆ ಪ್ರೇರಣೆಯೇನೆಂದು ಇನ್ನೂ ದೃಢಪಟ್ಟಿಲ್ಲ ಎಂದು ತನಿಖೆದಾರರು ತಿಳಿಸಿದ್ದಾರೆ.
ವಲಸೆಗಾರರರು ಇಲ್ಲೇ ನೆಲೆಸಲು ಅನುಕೂಲ ಮಾಡುವ ಸಂಸ್ಥೆಯಾದ ಅಮೆರಿಕನ್ ಸಿವಿಕ್ ಅಸೋಸಿಯೇಷನ್‌ನಲ್ಲಿ ಬೆಳಿಗ್ಗೆ 10 ಗಂಟೆ ಕಳೆದ ಸ್ವಲ್ಪ ಹೊತ್ತಿನಲ್ಲೇ ಈ ದಾಳಿ ನಡೆದಿದೆ. ಯಾರೂ ತಪ್ಪಿಸಿಕೊಳ್ಳದಂತೆ ಹಿಂಬಾಗಿಲಿಗೆ ಕಾರನ್ನು ಅಡ್ಡವಾಗಿ ನಿಲ್ಲಿಸಿದ ಬಂದೂಕುಧಾರಿ ಮುಂಭಾಗಿಲಿನಿಂದ ಪ್ರವೇಶಿಸಿ ಇಬ್ಬರು ಸ್ವಾಗತಕಾರಿಣಿಗಳ ಮೇಲೆ ಗುಂಡು ಹಾರಿಸಿದ.
ವಿಯೆಟ್ನಾಂ ವಲಸೆಗಾರನೆಂದು ನಂಬಲಾದ ಹಂತಕ ಬಳಿಕ ಕೋಣೆಯೊಳಗೆ ಪ್ರವೇಶಿಸಿ ಪೌರತ್ವ ತರಗತಿಗೆ ಹಾಜರಾಗಿದ್ದ ಜನರ ಮೇಲೆ ಗುಂಡಿನ ಮಳೆಗರೆದ. ಹಂತಕನ ಗುಂಡಿಗೆ ಒಬ್ಬ ಸ್ವಾಗತಕಾರಿಣಿ ಸತ್ತಿದ್ದರೆ ಇನ್ನೊಬ್ಬರು ಹೊಟ್ಟೆಗೆ ಗುಂಡು ತಾಗಿ ಸತ್ತವರಂತೆ ನಟನೆ ಮಾಡಿ ಡೆಸ್ಕ್ ಅಡಿ ತೆವಳಿಕೊಂಡು 911 ಸಂಖ್ಯೆಗೆ ಕರೆ ಮಾಡಿದರೆಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಕೇವಲ ಎರಡು ನಿಮಿಷಗಳಲ್ಲಿ ಆಗಮಿಸಿದರು. ತರಗತಿಯಲ್ಲಿ ಉಳಿದವರಿಗೆ ಗುಂಡುಹಾರಿಸಿ ಕೊಲ್ಲಲಾಗಿದ್ದು, ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿ ಮಾಡಿದ ವ್ಯಕ್ತಿ ಬಳಿಕ ಸ್ವಯಂ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ಅವನ ಬಳಿ 9 ಎಂಎಂ ಮತ್ತು .45-ಕ್ಯಾಲಿಬರ್‌ನ ಎರಡು ಕೈಪಿಸ್ತೂಲುಗಳು ಮತ್ತು ಚೂರಿಯನ್ನು ಪತ್ತೆಹಚ್ಚಿದ್ದಾರೆ. |