ಸ್ವಾತ್ ಕಣಿವೆಯಲ್ಲಿ ತಾಲಿಬಾನ್ ಉಗ್ರಗಾಮಿಗಳು ಅಪ್ರಾಪ್ತ ವಯಸ್ಕ ಬಾಲಕಿಗೆ ಸಾರ್ವಜನಿಕ ಛಡಿಯೇಟು ಶಿಕ್ಷೆ ನೀಡಿದ ಘಟನೆಯನ್ನು ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಶುಕ್ರವಾರ ಖಂಡಿಸಿದ್ದು, ಆಕೆಗೆ ನೀಡಿದ ಅಮಾನುಷ ಶಿಕ್ಷೆಯಿಂದ ಜನರು ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ ಎಂದು ಹೇಳಿದ್ದಾರೆ.
ನಿರ್ದಯ ಕ್ರಮದ ಬಗ್ಗೆ ಸರ್ಕಾರದಿಂದ ವರದಿ ಬಯಸಿರುವ ಜರ್ದಾರಿ, ಹೇಯ ಅಪರಾಧದಲ್ಲಿ ಭಾಗಿಯಾದವರನ್ನು ಬಂಧಿಸುವಂತೆ ಕರೆ ನೀಡಿದ್ದಾರೆಂದು ಅಧ್ಯಕ್ಷೀಯ ವಕ್ತಾರ ಫರಾತುಲ್ಲಾ ಬಾಬರ್ ತಿಳಿಸಿದರು. ಇಂತಹ ಅಮಾನವೀಯ ದೌರ್ಜನ್ಯವು ಬಹುಕಾಲದವರೆಗೆ ಜನರನ್ನು ದುಸ್ವಪ್ನದಂತೆ ಕಾಡುತ್ತದೆಂದು ಬಾಬರ್ ಹೇಳಿದ್ದಾರೆ.
ಅಪರಾಧ ಕೃತ್ಯವೆಸಗಿದವರು ಮಾನವ ಪೀಳಿಗೆ, ಧರ್ಮ ಮತ್ತು ನೈತಿಕತೆಗೆ ದ್ರೋಹ ಬಗೆದಿದ್ದಾರೆ. ಇಂತಹ ಅಮಾನುಷತೆ ಕ್ಷಮಾರ್ಹವಲ್ಲ ಮತ್ತು ಸಹನೀಯವಲ್ಲ ಎಂದು ಅವರು ಹೇಳಿದ್ದಾರೆ. ಉಗ್ರಗಾಮಿಗಳು ಬಂದೂಕುಗಳು ಮತ್ತು ಗುಂಡಿನ ಬೆದರಿಕೆ ಮೂಲಕ ಮಧ್ಯಕಾಲೀನ ಮತ್ತು ಅಸ್ಪಷ್ಟ ಕಾರ್ಯಸೂಚಿಯನ್ನು ಧರ್ಮದ ಹೆಸರಿನಲ್ಲಿ ಹೇರಲು ಬಯಸಿದ್ದು, ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಬಾಬರ್ ತಿಳಿಸಿದ್ದಾರೆ. |