ಬಾಹ್ಯಾಕಾಶಕ್ಕೆ ಸಂಪರ್ಕ ಉಪಗ್ರಹ ಉಡಾಯಿಸಲು ಶನಿವಾರ ಬೆಳಿಗ್ಗೆ ಸಿದ್ಧತೆ ಪೂರ್ಣವಾಗಿದ್ದು, ಉಡಾವಣೆ ಸನ್ನಿಹಿತವಾಗಿದೆಯೆಂದು ಉತ್ತರಕೊರಿಯ ತಿಳಿಸಿದೆ.
ಕ್ವಾಂಗ್‌ಮಿಯಾಂಗ್‌ಸಾಂಗ್-2 ಪ್ರಾಯೋಗಿಕ ಸಂಪರ್ಕ ಉಪಗ್ರಹವನ್ನು ಕ್ಯಾರಿಯರ್ ರಾಕೆಟ್ ಉನ್ಹಾ-2ರಿಂದ ಉಡಾವಣೆಗೆ ಸಿದ್ಧತೆಗಳು ಪೂರ್ಣವಾಗಿದೆ ಎಂದು ಬಾಹ್ಯಾಕಾಶ ತಂತ್ರಜ್ಞಾನದ ಕೊರಿಯ ಸಮಿತಿಯ ಮಾಹಿತಿಯನ್ನು ಉದಾಹರಿಸಿ ಕೊರಿಯದ ಕೇಂದ್ರ ನ್ಯೂಸ್ ಏಜನ್ಸಿ ವರದಿಮಾಡಿದೆ.
ಉಡಾವಣೆ ನಿಲ್ಲಿಸುವಂತೆ ಅಂತಾರಾಷ್ಟ್ರೀಯ ಒತ್ತಡ ಏರುತ್ತಿರುವ ನಡುವೆ ಉಪಗ್ರಹವನ್ನು ಉಡಾಯಿಸಿಯೇ ತೀರುವುದಾಗಿ ಉತ್ತರಕೊರಿಯ ಹೇಳಿದೆ. ಉತ್ತರಕೊರಿಯ ನಿಜವಾದ ಉದ್ದೇಶವು ದೂರಗಾಮಿ ಕ್ಷಿಪಣಿ ತಂತ್ರಜ್ಞಾನದ ಪರೀಕ್ಷೆ ಮಾಡುವುದೆಂದು ವಾಷಿಂಗ್ಟನ್, ಸೋಲ್ ಮತ್ತು ಟೋಕಿಯೊ ಶಂಕಿಸಿವೆ.
ಉತ್ತರ ಕೊರಿಯ ತನ್ನ ಬಳಿ ಪರಮಾಣು ಅಸ್ತ್ರಗಳಿವೆಯೆಂದು ಒಪ್ಪಿಕೊಂಡಿದ್ದು, ಪರಮಾಣು ಕಾರ್ಯಕ್ರಮ ಕೈಬಿಡುವ ಅಥವಾ ರಾಕೆಟ್ ಪರೀಕ್ಷೆ ನಿಲ್ಲಿಸುವ ವಾಗ್ದಾನಗಳನ್ನು ಪದೇ ಪದೇ ಮುರಿದಿದ್ದರಿಂದ ಉಪಗ್ರಹ ಉಡಾವಣೆ ಯೋಜನೆಯಿಂದ ಅಪಾಯದ ಭೀತಿ ಭುಗಿಲೆದ್ದಿದೆ. ಫ್ರಾನ್ಸ್ ಅಧ್ಯಕ್ಷ ನಿಕೋಲಾಸ್ ಸಾರ್ಕೋಜಿ ಜತೆ ಸ್ಟ್ರಾಸ್‌ಬರ್ಗ್‌ನಲ್ಲಿ ಭೇಟಿಯಾಗಿದ್ದ ಅಮೆರಿಕ ಅಧ್ಯಕ್ಷ ಒಬಾಮಾ, ಉಡಾವಣೆಯನ್ನು ನಿಲ್ಲಿಸಬೇಕೆಂದು ಹೇಳಿದ್ದಾರೆ.
ಉಡಾವಣೆ ಕುರಿತು ನಿಗಾವಹಿಸಲು ಅಮೆರಿಕ, ಜಪಾನ್ ಮತ್ತು ದಕ್ಷಿಣ ಕೊರಿಯ ರೆಡಾರ್ ಮತ್ತಿತರ ಕಣ್ಗಾವಲು ಉಪಕರಣದಿಂದ ಸಜ್ಜಾಗಿರುವ ಯುದ್ಧನೌಕೆಗಳನ್ನು ನಿಯೋಜಿಸಿದೆ. ಉಡಾವಣೆ ಕೈಬಿಡುವಂತೆ ಉತ್ತರಕೊರಿಯ ಮನವೊಲಿಸುವ ಯತ್ನಗಳು ಮುಂದುವರಿದಿದ್ದು, ಕಡೆಯ ನಿಮಿಷದ ರಾಜತಾಂತ್ರಿಕ ಬೆಳವಣಿಗೆಯ ಲಕ್ಷಣಗಳು ಕಂಡುಬಂದಿಲ್ಲ. |