ಅಮೆರಿಕದ ಪೈಲಟ್‌ರಹಿತ ಡ್ರೋನ್ ವಿಮಾನಗಳು ಶನಿವಾರ ಪಾಕಿಸ್ತಾನದ ವಾಯವ್ಯ ಬುಡಕಟ್ಟು ಪ್ರದೇಶದ ಮೇಲೆ ಮೂರು ಕ್ಷಿಪಣಿಗಳನ್ನು ಹಾರಿಸಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 13 ಜನರು ಸತ್ತಿದ್ದಾರೆ.
ಉತ್ತರ ವಜಿರಿಸ್ತಾನ ಬುಡಕಟ್ಟು ಏಜೆನ್ಸಿಯ ಕೇಂದ್ರದಿಂದ 40 ಕಿಮೀ ದೂರದಲ್ಲಿ ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬನ ಮನೆಯ ಮೇಲೆ ಡ್ರೋನ್ ವಿಮಾನವು ಕ್ಷಿಪಣಿಗಳನ್ನು ಹಾರಿಸಿತೆಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
ಉಗ್ರಗಾಮಿಗಳ ವಿರುದ್ಧ ಕಾರ್ಯಾಚರಣೆ ಸಲುವಾಗಿ ಡ್ರೋನ್ ವಿಮಾನಗಳಿಂದ ಅಮೆರಿಕ ದಾಳಿ ನಡೆಸುತ್ತಿದ್ದು, ಬಹುತೇಕ ನಾಗರಿಕರೇ ಸಾವನ್ನಪ್ಪುತ್ತಿದ್ದಾರೆಂದು ಸ್ಥಳೀಯರು ದೂರಿದ್ದಾರೆ. ಪಾಕಿಸ್ತಾನ ಸರ್ಕಾರ ಕೂಡ ಡ್ರೋನ್ ವಿಮಾನಗಳಿಂದ ಕ್ಷಿಪಣಿ ದಾಳಿ ನಿಲ್ಲಿಸುವಂತೆ ಅಮೆರಿಕಕ್ಕೆ ಆಗ್ರಹಿಸಿದೆ.ನಾಶಗೊಂಡ ಮನೆಯ ಅವಶೇಷಗಳಿಂದ 13 ದೇಹಗಳನ್ನು ಹೊರತೆಗೆದಿದ್ದು, ಅನೇಕ ಮಂದಿ ಮಹಿಳೆಯರು ಮತ್ತು ಮಕ್ಕಳು ಸತ್ತವರಲ್ಲಿ ಸೇರಿದ್ದಾರೆ.
ಡ್ರೋನ್ ದಾಳಿಯಲ್ಲಿ ಎಷ್ಟು ಮಂದಿ ಉಗ್ರಗಾಮಿಗಳು ಸತ್ತಿದ್ದಾರೆನ್ನುವುದು ದೃಢಪಟ್ಟಿಲ್ಲ.ಕಳೆದ ವರ್ಷದ ಆಗಸ್ಟ್‌ನಿಂದೀಚೆಗೆ ಅಮೆರಿಕ ನೇತೃತ್ವದ ಸಮ್ಮಿಶ್ರ ಪಡೆಗಳ ಕ್ಷಿಪಣಿ ದಾಳಿಗಳಿಂದ ಉಗ್ರಗಾಮಿಗಳು ಸೇರಿದಂತೆ 350 ಜನರು ಹತರಾಗಿದ್ದಾರೆ. ಆಫ್ಘಾನಿಸ್ತಾನಕ್ಕೆ ಹೊಂದಿಕೊಂಡಿರುವ ಪಾಕಿಸ್ತಾನ ಗಡಿಯು ಜಗತ್ತಿನಲ್ಲೇ ಅತ್ಯಂತ ಅಪಾಯಕಾರಿ ಸ್ಥಳ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಇತ್ತೀಚೆಗೆ ಘೋಷಿಸಿದ್ದಾರೆ. |