ಶ್ರೀಲಂಕಾದ ಯುದ್ಧಪೀಡಿತ ವಲಯದಲ್ಲಿ ಸಿಕ್ಕಿಬಿದ್ದಿರುವ ನಾಗರಿಕರು ಅಪಾರ ಸಂಖ್ಯೆಯಲ್ಲಿ ಸಾವು-ನೋವಿಗೀಡಾಗುತ್ತಿರುವ ವರದಿಗಳ ಬಗ್ಗೆ ವಿಶ್ವಸಂಸ್ಥೆ ಪ್ರಧಾನಕಾರ್ಯದರ್ಶಿ ಬಾನ್ ಕಿ ಮೂನ್ ಕಳವಳಪಟ್ಟಿದ್ದು, ಅಮಾಯಕ ನಾಗರಿಕರನ್ನು ರಕ್ಷಿಸುವಂತೆ ಸರ್ಕಾರಿ ಪಡೆಗಳು ಮತ್ತು ತಮಿಳು ಬಂಡುಕೋರರಿಗೆ ಮನವಿ ಮಾಡಿದ್ದಾರೆ.
ಶ್ರೀಲಂಕಾದ ವಾನ್ನಿ ಪ್ರದೇಶದಲ್ಲಿ ಭಾರೀ ಸಾವುನೋವಿಗೆ ತುತ್ತಾಗುವ ಮೂಲಕ ನಾಗರಿಕರು ತೀವ್ರ ಅಪಾಯದ ಸುಳಿಗೆ ಸಿಕ್ಕಿರುವ ವರದಿಗಳು ಮೇಲಿಂದ ಮೇಲೆ ಬರುತ್ತಿದ್ದು, ಎಲ್‌ಟಿಟಿಇ ಸಂಘರ್ಷ ವಲಯದಲ್ಲಿ ಸಣ್ಣ ಪ್ರದೇಶವೊಂದರಲ್ಲಿ ನಾಗರಿಕರ ಇಚ್ಛೆಗೆ ವಿರುದ್ಧವಾಗಿ ಅವರನ್ನು ಹಿಡಿದಿಟ್ಟಿರುವುದರಿಂದ ಬಾನ್ ಅತೀವ ನೊಂದಿರುವುದಾಗಿ ಬಾನ್ ಪರ ವಕ್ತಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಾಗರಿಕರ ಮುಕ್ತ ಚಲನವಲನದ ಬಗ್ಗೆ ನಿರ್ಬಂಧ ಮತ್ತು ವಿಶೇಷವಾಗಿ ಮಕ್ಕಳನ್ನು ಸೇನೆಗೆ ನೇಮಕಾತಿ ಮಾಡಿಕೊಳ್ಳುವ ಬಗ್ಗೆ ಪ್ರಧಾನಕಾರ್ಯದರ್ಶಿ ಆತಂಕ ವ್ಯಕ್ತಪಡಿಸಿದರು.58 ಚ.ಕಿಮೀ ಸುತ್ತಳತೆಯ ಸಂಘರ್ಷ ವಲಯದಲ್ಲಿ 150,000 ದಿಂದ 190,000 ತಮಿಳು ನಾಗರಿಕರು ಸಿಕ್ಕಿಬಿದ್ದಿದ್ದಾರೆಂದು ವಿಶ್ವಸಂಸ್ಥೆ ಅಂದಾಜು ಮಾಡಿದೆ.
ಕೆಲವು ನಾಗರಿಕರು ಸಂಘರ್ಷ ವಲಯದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಉಳಿದವರು ಅಲ್ಲಿಂದ ಕಾಲುಕೀಳದಂತೆ ಎಲ್‌ಟಿಟಿಇ ತಡೆಯುತ್ತಿದ್ದು, ಗುಂಡನ್ನು ಕೂಡ ಹಾರಿಸುತ್ತಿದ್ದಾರೆಂದು ನಂಬಲರ್ಹ ಮೂಲಗಳು ಹೇಳಿವೆ. |