ಜಗತ್ತಿನ ದೊಡ್ಡಣ್ಣ ಎನಿಸಿಕೊಂಡ ಅಮೆರಿಕದ ಬೆದರಿಕೆಗೂ ಜಗ್ಗದೆ ಉತ್ತರ ಕೊರಿಯಾ ಭಾನುವಾರ ಬೆಳಿಗ್ಗೆ ಅಣ್ವಸ್ತ್ರ ಸಾಮರ್ಥ್ಯದ ಕ್ಷಿಪಣಿಯನ್ನು ಉಡಾವಣೆಗೊಳಿಸುವ ಮೂಲಕ ವಿಶ್ವದ ಅನೇಕ ದೇಶಗಳ ಕೆಂಗಣ್ಣಿಗೆ ಗುರಿಯಾಗಿದೆ.
ಇಂದು ಬೆಳಿಗ್ಗೆ ಟೈಪಡಾಂಗ್ ಎನ್ನುವ ಸುಮಾರು 6,700ಕಿ.ಮೀ.ದೂರ ಕ್ರಮಿಸಬಲ್ಲ ಅಣ್ವಸ್ತ್ರ ಸಾಮರ್ಥ್ಯದ ಕ್ಷಿಪಣಿಯನ್ನು ಉಡಾಯಿಸಿರುವುದಾಗಿ ಜಪಾನ್ ಪ್ರಧಾನಿ ಖಚಿತಪಡಿಸಿದ್ದಾರೆ. ಈ ರಾಕೆಟ್ ಜಪಾನ್‌ನನ್ನು ಹಾದುಹೋಗಿರುವುದಾಗಿ ತಿಳಿಸಿದ್ದಾರೆ.
ಅಮೆರಿಕ ವಿದೇಶಾಂಗ ಸಚಿವಾಲಯ ಕೂಡ ಉತ್ತರ ಕೊರಿಯಾ ಕ್ಷಿಪಣಿಯನ್ನು ಉಡಾಯಿಸಿರುವ ಮಾಹಿತಿಯನ್ನು ಖಚಿತಪಡಿಸಿದೆ. ಉತ್ತರ ಕೊರಿಯಾ ಕ್ಷಿಪಣಿ ಉಡಾವಣೆಗೆ ಜಪಾನ್ ಆತಂಕ ವ್ಯಕ್ತಪಡಿಸಿದೆ.
ಉತ್ತರ ಕೊರಿಯಾ ಕ್ಷಿಪಣಿ ಉಡಾಯಿಸಿರುವ ಬಗ್ಗೆ ದಕ್ಷಿಣ ಕೊರಿಯಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಎಲ್ಲಾ ಎಚ್ಚರಿಕೆಯ ನಡುವೆಯೂ ಉತ್ತರ ಕೊರಿಯಾ ಕ್ಷಿಪಣಿ ಉಡಾಯಿಸಿರುವ ಬಗ್ಗೆ ವಿಶ್ವಸಂಸ್ಥೆ ಭದ್ರತಾ ಸಮಿತಿ ಸಭೆ ಕರೆಯುವಂತೆ ಜಪಾನ್ ಆಗ್ರಹಿಸಿದೆ.
ಅಮೆರಿಕ ಕಿಡಿ: ಅಣ್ವಸ್ತ್ರ ಕ್ಷಿಪಣಿ ಉಡಾವಣೆ ನಡೆಸದಂತೆ ಎಚ್ಚರಿಕೆಯ ನಡುವೆಯೇ ಉಡಾವಣೆ ಮಾಡಿದ ಉತ್ತರ ಕೊರಿಯಾದ ನಡುವಳಿಕೆ ಪ್ರಚೋದನಾಕಾರಿಯಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದೆ. |