ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಷಿಯಾ ಸಮುದಾಯದವರೇ ಅಧಿಕವಾಗಿರುವ ಚೆಕ್‌ವಾಲಾ ಪ್ರದೇಶದಲ್ಲಿರುವ ಮಸೀದಿಯೊಂದರಲ್ಲಿ ಧಾರ್ಮಿಕ ಸಭೆ ನಡೆಸುತ್ತಿದ್ದ ವೇಳೆ ಆತ್ಮಾಹುತಿ ಬಾಂಬ್ ದಾಳಿ ನಡೆದ ಪರಿಣಾಮ 30 ಮಂದಿ ಸಾವನ್ನಪ್ಪಿ, 200ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ಭಾನುವಾರ ಮಧ್ನಾಹ್ನ ಸಂಭವಿಸಿದೆ.
ಪಂಜಾಬ್ ಪ್ರಾಂತ್ಯದಲ್ಲಿರುವ ಚೆಕ್‌ವಾಲಾ ಪ್ರದೇಶದಲ್ಲಿರುವ ಮಸೀದಿಯೊಂದರಲ್ಲಿ 2ಸಾವಿರಕ್ಕೂ ಅಧಿಕ ಮಂದಿ ಧಾರ್ಮಿಕ ಸಭೆ ನಡೆಯುತ್ತಿದ್ದ ವೇಳೆ ಈ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, 30 ಮಂದಿ ಬಲಿಯಾಗಿರುವುದಾಗಿ ಪೊಲೀಸ್ ಅಧಿಕಾರಿ ಅಬ್ದುಲ್ ಕರೀಂ ದೂರವಾಣಿ ಮೂಲಕ ಸುದ್ದಿಸಂಸ್ಥೆಗಳಿಗೆ ತಿಳಿಸಿದ್ದಾರೆ.
ಆತ್ಮಾಹುತಿ ದಾಳಿಯಲ್ಲಿ ಘಟನೆಗೊಂಡವರಲ್ಲಿ ಹತ್ತು ಮಂದಿ ಸ್ಥಿತಿ ಚಿಂತಾಜನಕ ಆಗಿರುವುದಾಗಿ ಚೆಕ್‌ವಾಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹೇಳಿದ್ದಾರೆ.
ದಾಳಿಯಲ್ಲಿ ಗಾಯಗೊಂಡವರನ್ನು ರಾವಲ್ಪಿಂಡಿ ಮತ್ತು ಇಸ್ಲಾಮಾಬಾದ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಆತ್ಮಾಹುತಿ ದಾಳಿಯ ಹೊಣೆಗಾರಿಕೆಯನ್ನು ಈವರೆಗೂ ಯಾವುದೇ ಸಂಘಟನೆಗಳು ಹೊತ್ತುಕೊಂಡಿಲ್ಲ. ನಿನ್ನೆಯಷ್ಟೇ ಇಸ್ಲಾಮಾಬಾದ್‌ನಲ್ಲಿ ಆತ್ಮಾಹುತಿ ದಾಳಿಗೆ ಅರೆಸೇನಾ ಪಡೆಯ ಎಂಟು ಮಂದಿ ಸೈನಿಕರು ಸಾವನ್ನಪ್ಪಿರುವ ಬೆನ್ನಲ್ಲೇ ಈ ದಾಳಿ ನಡೆದಿದೆ. |