ಭಾನುವಾರ ರಾತ್ರಿಯ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ತನ್ನ ಗುಂಪಿನ ಕೈವಾಡವಿದೆಯೆಂದು ಹೇಳಿರುವ ಪಾಕಿಸ್ತಾನದ ತಾಲಿಬಾನ್ ಕಮಾಂಡರ್ ಬೈತುಲ್ಲಾ ಮೆಹ್ಸೂದ್, ಪಾಕಿಸ್ತಾನದ ಪ್ರದೇಶಗಳ ಮೇಲೆ ಅಮೆರಿಕ ಕ್ಷಿಪಣಿ ದಾಳಿಗಳನ್ನು ನಿಲ್ಲಿಸದಿದ್ದರೆ ವಾರಕ್ಕೆ ಎರಡು ದಾಳಿಗಳನ್ನು ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾನೆ.
ಅಮೆರಿಕ ಹಾಗೂ ಪಾಕಿಸ್ತಾನ ಕೂಡ ವಾಯುವ್ಯ ಭಾಗದಲ್ಲಿ ನಿಯೋಜಿಸಿರುವ ಸೈನಿಕ ಪಡೆಯನ್ನು ಹಿಂತೆಗೆಯಬೇಕು ಇಲ್ಲದಿದ್ದಲ್ಲಿ ವಾರದಲ್ಲಿ ಎರಡು ಬಾರಿ ಆತ್ಮಾಹುತಿ ಬಾಂಬ್ ದಾಳಿ ನಡೆಸುವುದು ನಿಶ್ಚಿತ ಎಂದು ತಾಲಿಬಾನ್ ಸಹಾಯಕ ಕಮಾಂಡರ್ ಹಕೀಮುಲ್ಲಾ ಮೆಹ್ಸೂದ್ ಕೂಡ ಕಿಡಿಕಾರಿದ್ದಾನೆ. ಈ ಮೊದಲು ನಾವು ಮೂರು ತಿಂಗಳಿಗೊಮ್ಮೆ ದಾಳಿ ನಡೆಸುತ್ತಿದ್ದೇವು, ಆದರೆ ಇದೀಗ ನಮ್ಮ ಬೇಡಿಕೆ ಈಡೇರಿದಿದ್ದ ಪರಿಣಾಮ ವಾರಕ್ಕೆ ಎರಡು ಬಾರಿ ದಾಳಿ ನಡೆಸುವುದಾಗಿ ಹೇಳಿದ್ದಾನೆ.
ಪಾಕಿಸ್ತಾನದ ರಾಜಧಾನಿಯ ದಕ್ಷಿಣಕ್ಕೆ ಕಿಕ್ಕಿರಿದು ತುಂಬಿದ್ದ ಶಿಯಾ ಮಸೀದಿ ಬಳಿ ಭಾನುವಾರ ನಡೆದ ಬಾಂಬ್ ಸ್ಫೋಟದಲ್ಲಿ 22 ಜನರು ಅಸುನೀಗಿದ್ದು, ಅಲ್ ಖಾಯಿದಾ ಮತ್ತು ತಾಲಿಬಾನ್ ಹೋರಾಟಗಾರರು ಪ್ರವರ್ಧಿಸಿರುವ ಆಫ್ಘನ್ ಗಡಿ ಪ್ರದೇಶದಲ್ಲಿ ಪಾಕ್ ಭದ್ರತೆ ಕುಸಿಯುತ್ತಿರುವುದಕ್ಕೆ ನಿದರ್ಶನವಾಗಿದೆ. ಟಿವಿಯ ಚಿತ್ರದಲ್ಲಿ ಮಸೀದಿಯ ಎದುರುಗಡೆ ರಕ್ತದ ಮಡುವು ಕಂಡುಬಂತು. ಹರಿದ ಅಂಗಿಗಳು ಮತ್ತು ಚೆಲ್ಲಾಪಿಲ್ಲಿಯಾಗಿ ಬಿದ್ದ ಬೂಟುಗಳು ಸ್ಫೋಟದ ಭೀಕರತೆಗೆ ಸಾಕ್ಷಿಯಾಗಿದ್ದವು.
ಚಕ್ವಾಲ್ ನಗರದ ಮಸೀದಿಯೊಂದರ ಪ್ರವೇಶ ದ್ವಾರದಲ್ಲಿ ಆತ್ಮಾಹುತಿ ದಾಳಿಕೋರ ಸ್ಫೋಟಕಗಳನ್ನು ಸಿಡಿಸಿದ ಎಂದು ಪ್ರಾಂತ್ಯದ ಉನ್ನತ ಭದ್ರತಾ ಅಧಿಕಾರಿ ತಿಳಿಸಿದರು. ಪಾಕಿಸ್ತಾನವು ಜನಾಂಗೀಯ ಹಿಂಸಾಚಾರದ ಇತಿಹಾಸವನ್ನು ಹೊಂದಿದ್ದು, ಸುನ್ನಿ ಉಗ್ರಗಾಮಿಗಳು ಅಲ್ಪಸಂಖ್ಯಾತ ಶಿಯಾ ಮುಸ್ಲಿಮರ ಮೇಲೆ ಆಗಾಗ್ಗೆ ದಾಳಿ ಮಾಡುತ್ತಾರೆ. |