ಉತ್ತರ ಕೊರಿಯ ರಾಕೆಟ್ ಉಡಾವಣೆ ಮಾಡಿದ್ದಕ್ಕೆ ಅದರ ವಿರುದ್ಧ ಯಾವ ಕ್ರಮಗಳನ್ನು ಕೈಗೊಳ್ಳಬೇಕು? ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಈ ವಿಷಯದ ಬಗ್ಗೆ ದ್ವಂದ್ವ ನಿಲುವುಗಳನ್ನು ಹೊಂದಿದ್ದು, ಮೇಲಿಂದ ಮೇಲೆ ಚರ್ಚೆಗಳನ್ನು ನಡೆಸಿದರೂ ಭಾನುವಾರ ರಾತ್ರಿ ಯಾವುದೇ ಉತ್ತರ ಕಂಡುಕೊಳ್ಳಲು ವಿಫಲವಾಯಿತು.
ಉತ್ತರ ಕೊರಿಯ ವಿಶ್ವಸಂಸ್ಥೆ ನಿರ್ಣಯ ಉಲ್ಲಂಘಿಸಿದೆಯೇ ಮತ್ತು ಅದು ಶಿಕ್ಷೆಗೆ ಅರ್ಹವೇ ಎನ್ನುವ ಬಗ್ಗೆ ಭಿನ್ನಾಭಿಪ್ರಾಯಗಳು ಕೇಳಿಬಂದು, ಯಾವುದೇ ಒಪ್ಪಂದಕ್ಕೆ ಬರಲು ಮಂಡಳಿಯ ಸದಸ್ಯರು ವಿಫಲರಾದರೆಂದು ತಿಳಿದುಬಂದಿದೆ.
ಅಂತಾರಾಷ್ಟ್ರೀಯ ಸಮುದಾಯದಿಂದ ತೀಕ್ಷ್ಣ ಪ್ರತಿಕ್ರಿಯೆಗೆ ಅಮೆರಿಕ ಮತ್ತು ಜಪಾನ್ ಒತ್ತಾಯಿಸುತ್ತಿವೆ. ಆದರೆ ಚೀನಾ ಮತ್ತು ರಷ್ಯಾ ವಾದವೇ ಬೇರೆತೆರನಾಗಿದೆ. ಈ ಪ್ರದೇಶದಲ್ಲಿ ಸ್ಥಿರತೆಯ ಬಗ್ಗೆ ಕವಿದಿರುವ ಆತಂಕ ಉದಾಹರಿಸಿ, ಎಚ್ಚರಿಕೆಯ ನಿಲುವಿಗೆ ಚೀನಾ, ರಷ್ಯಾ ಆದ್ಯತೆ ನೀಡಿವೆ. ಉತ್ತರಕೊರಿಯ ದೂರ ವ್ಯಾಪ್ತಿಯ ರಾಕೆಟ್‌ನ್ನು ಭಾನುವಾರ ಬೆಳಿಗ್ಗೆ ಉಡಾವಣೆ ಮಾಡಿದ್ದು, ಅದು ಸಂಪರ್ಕ ಉಪಗ್ರಹವೆಂದು ವಾದಿಸಿದೆ. ಆದರೆ ರಾಕೆಟ್ ಕ್ಷಿಪಣಿ ಪರೀಕ್ಷೆಯಾಗಿರಬಹುದೆಂದು ಅಮೆರಿಕ ಮತ್ತು ಜಪಾನ್ ಶಂಕೆ ವ್ಯಕ್ತಪಡಿಸಿವೆ. |