ಸ್ವಾತ್‌ನಲ್ಲಿ 17 ವರ್ಷ ವಯಸ್ಸಿನ ಬಾಲಕಿಗೆ ಛಡಿಯೇಟು ನೀಡಿದವರ ಹಿಂದಿರುವ ದುಷ್ಕರ್ಮಿಗಳ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲವೆಂದು ಪಾಕಿಸ್ತಾನ ಸುಪ್ರೀಂಕೋರ್ಟ್ ಸೋಮವಾರ ಎನ್‌ಡಬ್ಲ್ಯುಎಫ್‌ಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.
ಅಪ್ರಾಪ್ತ ವಯಸ್ಕಬಾಲಕಿ ಪರಪುರುಷನೊಟ್ಟಿಗೆ ಮನೆಯಿಂದ ಹೊರಗೆ ಬಂದ ತಪ್ಪಿಗೆ ತಾಲಿಬಾನ್ ನಿರ್ದಯವಾಗಿ ಬಾಲಕಿಗೆ ಛಡಿಯೇಟಿನ ಶಿಕ್ಷೆ ನೀಡಿತ್ತು.
ಏತನ್ಮಧ್ಯೆ, ಬಾಲಕಿಗೆ ಛಡಿಯೇಟು ನೀಡಿದ ಚಿತ್ರಗಳು ಮೊಬೈಲ್ ವಿಡಿಯೊದಲ್ಲಿದ್ದರೂ, ಬಾಲಕಿ ಘಟನೆಯನ್ನು ನಿರಾಧಾರ ಮತ್ತು ಸತ್ಯಾಂಶಗಳ ಆಧಾರದ ಮೇಲಿಲ್ಲವೆಂದು ಹೇಳುತ್ತಿದ್ದಾಳೆ. ಸಮಾಜದ ಒತ್ತಡ ಮತ್ತು ತಾಲಿಬಾನ್ ಉಗ್ರಗಾಮಿಗಳ ಬಗ್ಗೆ ಭಯದಿಂದ ಬಾಲಕಿ ಸತ್ಯವನ್ನು ತಿರುಚಿ ಹೇಳಿಕೆ ನೀಡುತ್ತಿರಬಹುದೆಂದು ಶಂಕಿಸಲಾಗಿದೆ.
ಆಯುಕ್ತ ಮಲಾಕಾಂಡ್ ಸಯ್ಯದ್ ಮೊಹಮದ್ ಜಾವೇದ್ ಮತ್ತು ಹಿರಿಯ ನ್ಯಾಯಾಧೀಶ ಸೇರಿದಂತೆ ಇಬ್ಬರು ಉನ್ನತಾಧಿಕಾರಿಗಳು ದೂರದ ತೆಹ್ಸೀಲ್ ಕಬಾಲ್‌ನಲ್ಲಿರುವ ಕಾಲಾ ಗ್ರಾಮಕ್ಕೆ ಭೇಟಿ ನೀಡಿದ್ದು, ಬಾಲಕಿಯ ಹೇಳಿಕೆಯನ್ನು ದಾಖಲಿಸಿದ್ದಾರೆ. ಈ ಘಟನೆಯನ್ನು ಸಂಪೂರ್ಣವಾಗಿ ನಿರಾಕರಿಸಿದ ಬಾಲಕಿ ಮತ್ತು ಅವಳ ಪತಿಯ ಹೇಳಿಕೆಯನ್ನು ಇಬ್ಬರು ಅಧಿಕಾರಿಗಳು ದಾಖಲಿಸಿದರು.
ಪೂರ್ಣ ಭದ್ರತೆಯಲ್ಲಿ ತಂಡವು ಪ್ರದೇಶಕ್ಕೆ ತಲುಪಿ, ಬಾಲಕಿಯನ್ನು ಭೇಟಿ ಮಾಡಿ ಕಬಾಲ್‌ನಲ್ಲಿ ಯಾವುದೋ ಜಾಗದಲ್ಲಿ ಸಾರ್ವಜನಿಕವಾಗಿ ಥಳಿಸಿದ ಚಿತ್ರವಿರುವ ವಿಡಿಯೊವನ್ನು ಬಾಲಕಿಗೆ ತೋರಿಸಿದಾಗ, ತಾನು ಸಂತೋಷದಿಂದ ವೈವಾಹಿಕ ಜೀವನ ಸಾಗಿಸುತ್ತಿದ್ದು, ತನಗೆ ಛಡಿಯೇಟಿನ ಶಿಕ್ಷೆ ನೀಡಿಲ್ಲವೆಂದು ಬಾಲಕಿ ಹೇಳಿದ್ದಾಳೆ.
ಖಾಸಗಿ ಟೆಲಿವಿಷನ್ ಚಾನೆಲ್‌ಗಳಲ್ಲಿ ಘಟನೆಯ ಚಿತ್ರಣವು ಪ್ರಕಟವಾದ ಬಳಿಕ ಅಪ್ರಾಪ್ತ ವಯಸ್ಕ ಬಾಲಕಿಗೆ ಛಡಿಯೇಟಿನ ಶಿಕ್ಷೆ ನೀಡಿದ್ದನ್ನು ಮುಖ್ಯನ್ಯಾಯಮೂರ್ತಿ ಇಫ್ತಿಕರ್ ಮಹಮದ್ ಚೌಧರಿ ಏಕಪಕ್ಷೀಯವಾಗಿ ಗಮನಿಸಿದ್ದರು. ಏತನ್ಮಧ್ಯೆ, ಪ್ರತಿಭಟನೆಕಾರರು ಇಸ್ಲಾಮಾಬಾದಿನಲ್ಲಿ ಭಾರೀ ರ‌್ಯಾಲಿ ಆಯೋಜಿಸಿ ತಾಲಿಬಾನ್ ಅಮಾನುಷ ವರ್ತನೆಯನ್ನು ಪ್ರತಿಭಟಿಸಿದ್ದಾರೆ. |