ಯಾವುದೇ ವಿದೇಶಿ ಮಿಲಿಟರಿಗೆ ನಮ್ಮ ರಾಷ್ಟ್ರದೊಳಕ್ಕೆ ಪಾದವೂರಲು ಅವಕಾಶ ನೀಡುವುದಿಲ್ಲ ಮತ್ತು ಕಾನೂನು ಜಾರಿ ಸಂಸ್ಥೆಗಳು ರಾಷ್ಟ್ರದೊಳಕ್ಕೆ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತದೆಂದು ಪಾಕ್ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಷಿ ತಿಳಿಸಿದ್ದಾರೆ.
ತಾವು ವಾಷಿಂಗ್ಟನ್‌ಗೆ ಭೇಟಿ ನೀಡಿದ್ದಾಗ ಕೂಡ ಅಮೆರಿಕ ಮತ್ತು ನ್ಯಾಟೊಗೆ ಇದೇ ಮಾತನ್ನು ಹೇಳಿದ್ದು, ಅವರು ನಮ್ಮ ದೃಷ್ಟಿಕೋನವನ್ನು ಅರ್ಥಮಾಡಿಕೊಂಡು ಒಪ್ಪಿಗೆ ಸೂಚಿಸಿದ್ದಾರೆಂದು ಖುರೇಷಿ ವರದಿಗಾರರ ಜತೆ ಮಾತನಾಡುತ್ತಾ ತಿಳಿಸಿದರು.
ಪಾಕಿಸ್ತಾನಕ್ಕೆ ಖಾಲಿ ಚೆಕ್ ನೀಡುವ ಪ್ರಶ್ನೆಯೇ ಇಲ್ಲ ಎಂದು ಅಮೆರಿಕ ಅಧ್ಯಕ್ಷ ಒಬಾಮಾ ಹೇಳಿಕೆ ಉಲ್ಲೇಖಿಸಿ, ಪಾಕಿಸ್ತಾನವು ಯಾವುದೇ ಖಾಲಿ ಚೆಕ್ ನೀಡುವುದಿಲ್ಲ ಮತ್ತು ಸ್ವೀಕರಿಸುವುದೂ ಇಲ್ಲವೆಂದು ಅವರು ಪ್ರತಿಕ್ರಿಯಿಸಿದ್ದಾರೆ. 'ನಮ್ಮದು ಸಾರ್ವಬೌಮ ರಾಷ್ಟ್ರವಾಗಿದ್ದು, ಆತ್ಮಗೌರವ ಹೊಂದಿದ್ದೇವೆ. ಅಮೆರಿಕವು ಮಿಲಿಟರಿ ಮತ್ತು ಆರ್ಥಿಕ ಶಕ್ತಿಯಾಗಿದ್ದು, ಮಿತ್ರರಾಷ್ಟ್ರವಾಗಿ ಸಮಾನತೆಯ ಆಧಾರದ ಮೇಲೆ ಅವರ ಜತೆ ಮಾತುಕತೆ ಬಯಸುತ್ತೇವೆ' ಎಂದು ಖುರೇಷಿ ಹೇಳಿದ್ದಾರೆ. |