ಬಾಗ್ದಾದ್‌ನಲ್ಲಿ ಮಾರಕ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿದ್ದು, 21 ಜನರು ಸತ್ತು ಕನಿಷ್ಠ 64 ಜನರು ಗಾಯಗೊಂಡ ಭೀಕರ ಘಟನೆಗಳು ಸೋಮವಾರ ಸಂಭವಿಸಿವೆ. ಸಾದರ್ ನಗರದ ಶಿಯಾ ಕೊಳೆಗೇರಿಯಲ್ಲಿ ಅತ್ಯಂತ ಮಾರಕ ದಾಳಿ ಸಂಭವಿಸಿತು.
ನಿಲ್ಲಿಸಿದ್ದ ಕಾರ್ ಬಾಂಬ್ ಮಾರುಕಟ್ಟೆಯಲ್ಲಿ ಸ್ಫೋಟಗೊಂಡು, 10 ಜನರು ಸತ್ತಿದ್ದಾರೆ. ಅದರಲ್ಲಿ ಮೂವರು ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದ್ದು, ಕನಿಷ್ಠ 28 ಜನರು ಗಾಯಗೊಂಡಿದ್ದಾರೆಂದು ಇರಾಕಿನ ಪೊಲೀಸ್ ಮತ್ತು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
2 ಗಂಟೆಗಳ ಅವಧಿಯಲ್ಲಿ ಒಂದರ ಹಿಂದೊಂದು ನಾಲ್ಕು ಬಾಂಬ್‌ಗಳು ನಗರವನ್ನು ಅಪ್ಪಳಿಸಿದವು. ಮುಖ್ಯವಾಗಿ ಶಿಯಾ ನೆರೆಹೊರೆಗಳಲ್ಲಿ ಜನರು ಶಾಪಿಂಗ್ ಮಾಡುವಾಗ ಅಥವಾ ಕೆಲಸ ಹುಡುಕುವಾಗ ಈ ಬಾಂಬ್ ಸ್ಫೋಟಗಳು ಸಂಭವಿಸಿವೆ.ಬೆಳಿಗ್ಗೆ 7.30ಕ್ಕೆ ಮೊದಲ ದಾಳಿ ನಡೆಯಿತು. ರಾಜಧಾನಿಯ ಮಧ್ಯದಲ್ಲಿ ಕಾರ್ ಬಾಂಬ್ ಸ್ಫೋಟಗೊಂಡು ಕನಿಷ್ಠ 6 ಜನರು ಸತ್ತರು ಮತ್ತು 16 ಮಂದಿ ಗಾಯಗೊಂಡರು.
ಸತ್ತವರಲ್ಲಿ ಬಹುತೇಕ ಮಂದಿ ಕೆಲಸ ಹುಡುಕುತ್ತಿದ್ದ ಕೂಲಿ ಕಾರ್ಮಿಕರು. ಒಂದು ಗಂಟೆಯ ಬಳಿಕ ಪೊಲೀಸ್ ಬೆಂಗಾವಲಿನ ಮೇಲೆ ಬಾಂಬ್ ಗುರಿಯಿಟ್ಟಿದ್ದರಿಂದ ಮೂವರು ಸತ್ತಿದ್ದಾರೆ ಮತ್ತು 8 ಮಂದಿ ಗಾಯಗೊಂಡಿದ್ದಾರೆಂದು ಪೊಲೀಸ್ ಅಧಿಕಾರಿ ಹೇಳಿದರು. ಸಾದರ್ ನಗರ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಇನ್ನೆರಡು ಕಾರ್ ಬಾಂಬ್‌ಗಳು ಕೆಲವೇ ನಿಮಿಷಗಳಲ್ಲಿ ಸ್ಫೋಟಿಸಿ ಒಟ್ಟು 12 ಮಂದಿ ಸತ್ತಿದ್ದಾರೆ ಮತ್ತು 40 ಜನರು ಗಾಯಗೊಂಡಿದ್ದಾರೆಂದು ಭದ್ರತಾ ಅಧಿಕಾರಿ ಹೇಳಿದರು.ಇರಾಕ್‌ನಲ್ಲಿ ಹಿಂಸಾಚಾರ ಶೇ.90ರಷ್ಟು ಕುಸಿದು ಶಾಂತಿ ಮೂಡುತ್ತಿರುವ ಹಂತದಲ್ಲೇ ಸ್ಫೋಟಗಳು ಸಂಭವಿಸಿವೆ. |