ಲಾಕ್ವಿಲಾ: ಮಧ್ಯ ಇಟಲಿಯಲ್ಲಿ ಸೋಮವಾರ ಮುಂಜಾನೆ ಜನರು ನಿದ್ರಾವಶರಾಗಿದ್ದಾಗಲೇ ಭೀಕರ ಭೂಕಂಪ ಸಂಭವಿಸಿದ್ದು, ಕನಿಷ್ಠ 150 ಜನರು ಸತ್ತಿದ್ದು, 1500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಇಟಲಿ ಮಾಧ್ಯಮಗಳು ವರದಿ ಮಾಡಿವೆ. ಅಬ್ರುಜೊ ಪ್ರದೇಶದಲ್ಲಿ ಅನೇಕ ಮನೆಗಳು ಕುಸಿದುಬಿದ್ದಿರುವುದರಿಂದ ಸತ್ತವರ ಸಂಖ್ಯೆ ಮತ್ತಷ್ಟು ಹೆಚ್ಚುವುದೆಂದು ನಿರೀಕ್ಷಿಸಲಾಗಿದೆ.
5.8 ತೀವ್ರತೆಯ ಭೂಕಂಪದ ಕೇಂದ್ರಬಿಂದು ಅಬ್ರುಜೊ ರಾಜಧಾನಿ ಎಲ್ ಅಕ್ವಿಲಾವಾಗಿದ್ದು, ಎಲ್ಲೆಲ್ಲೂ ವಿನಾಶಕಾರಿಯಾದ ಹೃದಯವಿದ್ರಾವಕ ದೃಶ್ಯ ಕಂಡುಬಂದಿದ್ದು, ಸೈರನ್‌ಗಳು ಮೊಳಗಿದವು ಮತ್ತು ರಕ್ಷಣಾ ತಂಡವು ಅವಶೇಷಗಳಲ್ಲಿ ಸಿಕ್ಕಿಬಿದ್ದ ಜನರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ತೊಡಗಿತು ಎಂದು ಆನ್ಸಾ ಸುದ್ದಿಸಂಸ್ಥೆ ಹೇಳಿದೆ. ಮುಂಜಾನೆ 3.30ಕ್ಕೆ ಭೂಕಂಪ ಅಪ್ಪಳಿಸಿದಾಗ ಸಾವಿರಾರು ಜನರಪ ನಿದ್ರೆಯಿಂದ ಎಚ್ಚೆತ್ತು ರಸ್ತೆಗಳಿಗೆ ಓಡಿದರೆಂದು ವರದಿ ತಿಳಿಸಿದೆ.
ಕ್ಯಾಸ್ಟೆಲುನುವೊದ ಸಣ್ಣ ಪಟ್ಟಣಗಳಾದ ಪೋಗಿಯೊ ಪಿಕೆಂಜೆಯಲ್ಲಿ ಒಬ್ಬರು, ಟಾರ್ಮಿನ್‌ಟಾರ್ಟೆಯಲ್ಲಿ ಒಬ್ಬರು ಮತ್ತು ಮೂರು ವರ್ಷ ವಯಸ್ಸಿನ ಬಾಲಕಿ ಸೇರಿ ಫೋಸಾದಲ್ಲಿ ಇಬ್ಬರು ಮೃತಪಟ್ಟಿದ್ದಾರೆಂದು ಪೊಲೀಸರು ಆನ್ಸಾ ಸುದ್ದಿಸಂಸ್ಥೆಗೆ ದೃಢಪಡಿಸಿದ್ದಾರೆ. ಎಲ್ ಅಕ್ವಿಲಾದಲ್ಲಿ ಇನ್ನೂ ನಾಲ್ಕು ಮಂದಿ ಮಕ್ಕಳು ಆಸ್ಪತ್ರೆಯೊಂದರಲ್ಲಿ ಸತ್ತಿದ್ದಾರೆಂದು ಆನ್ಸಾ ಹೇಳಿದೆ. ಸಮೀಪದ ಸಾನ್ ಡಿಮಿಟ್ರಿಯೊ ಡೇ ವೆಸ್ಟನಿಯಲ್ಲಿ 8 ಮಂದಿ ನಾಪತ್ತೆಯಾಗಿದ್ದಾರೆಂದು ಸಾರ್ವಜನಿಕ ಸುರಕ್ಷತೆ ಅಧಿಕಾರಿಗಳು ಹೇಳಿದ್ದಾರೆ.
ಇದು ಕಳೆದ ಮೂರು ದಶಕಗಳಲ್ಲಿ ಇಟಲಿಯ್ಲಲಿ ನಡೆದ ಅತಿ ದೊಡ್ಡ ಭೀಕರ ಭೂಕಂಪವಾಗಿದೆ. ಲಾಕ್ವಿಲಾ ಪಟ್ಟಣದಲ್ಲಿ ಕಟ್ಟಡಗಳು ನೆಲಸಮವಾಗಿದ್ದು, ಶಾಲಾ ಕಾಲೇಜುಗಳೂ ಕುಸಿದು ಬಿದ್ದಿವೆ. ಕುಸಿದು ಬಿದ್ದ ಕಟ್ಟಡಗಳೆಡೆಯಲ್ಲಿ ಇನ್ನೂ ಹೆಚ್ಚು ಮಂದಿ ಸಿಕ್ಕಿ ಹಾಕಿಕೊಂಡಿರುವ ಬಗ್ಗೆ ಸಂಶಯವಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ. |