ಅಮೆರಿಕ ಮೂಲದ ಸಂಶೋಧನಾ ಸಂಸ್ಥೆಯೊಂದು ಮಂಗಳವಾರ ಉತ್ತರ ಕೊರಿಯ ರಾಕೆಟ್ ಉಡಾವಣೆಯ ಉಪಗ್ರಹ ಚಿತ್ರಗಳನ್ನು ಸಾರ್ವಜನಿಕವಾಗಿ ಮಂಗಳವಾರ ಬಿಡುಗಡೆ ಮಾಡಿದೆ.
ವಿಜ್ಞಾನ ಮತ್ತು ಅಂತಾರಾಷ್ಟ್ರೀಯ ಭದ್ರತೆ ಸಂಸ್ಥೆ ಬಿಡುಗಡೆ ಮಾಡಿದ ಉಪಗ್ರಹ ಚಿತ್ರಗಳನ್ನು ಡಿಜಿಟಲ್‌ಗ್ಲೋಬ್ ಸ್ವೀಕರಿಸಿದ್ದು, ಕ್ಷಿಪಣಿಯ ಎಕ್ಸಾಸ್ಟ್ ಪ್ಲ್ಯೂಮ್ ಮತ್ತು ಉರಿಯುವ ಪ್ರೊಪೆಲೆಂಟ್‌ನಿಂದ ಜ್ವಾಲೆಗಳನ್ನು ತೋರಿಸಿದೆ. ಉಡಾವಣೆ ನೆಲೆಯಿಂದ ಈಶಾನ್ಯ ತೀರದಲ್ಲಿ ಮುಸುಡಾನ್ ರಿಯಲ್ಲಿ ಕೆಲವೇ ಕಿಮೀ ದೂರದಿಂದ ಚಿತ್ರಗಳನ್ನು ಸೆರೆಹಿಡಿಯಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಶಾಂತಿಯುತ ಉದ್ದೇಶದ ಪ್ರಾಯೋಗಿತ ಸಂಪರ್ಕ ಉಪಗ್ರಹವನ್ನು ಕಕ್ಷೆಗೆ ಬಿಡುತ್ತಿರುವುದಾಗಿ ಉತ್ತರಕೊರಿಯ ತಿಳಿಸಿತ್ತು. ಆದರೆ ವಿಶ್ವಸಂಸ್ಥೆಯ ನಿರ್ಣಯಗಳನ್ನು ಧಿಕ್ಕರಿಸಿ ಟೈಪೆಡಾಂಗ್-2 ಕ್ಷಿಪಣಿಯ ಪರೀಕ್ಷೆ ಉತ್ತರ ಕೊರಿಯ ನಿಜವಾದ ಉದ್ದೇಶವೆಂದು ಅಮೆರಿಕ ಮತ್ತು ಮಿತ್ರರಾಷ್ಟ್ರಗಳು ಶಂಕಿಸಿವೆ. ಏತನ್ಮಧ್ಯೆ, ಉತ್ತರ ಕೊರಿಯ ಹೇಳಿರುವಂತೆ ಕಕ್ಷೆಯಲ್ಲಿ ಯಾವುದೇ ಉಪಗ್ರಹವನ್ನು ಗುರುತಿಸಲಾಗಿಲ್ಲ ಎಂದು ದಕ್ಷಿಣ ಕೊರಿಯ, ಜಪಾನ್, ಅಮೆರಿಕ ಮಿಲಿಟರಿ ಮತ್ತು ರಷ್ಯಾ ಅಧಿಕಾರಿ ತಿಳಿಸಿದ್ದಾರೆ.
ಉಡಾವಣೆಯು ದೂರಗಾಮಿ ಕ್ಷಿಪಣಿಯ ವಿಫಲ ಪರೀಕ್ಷೆಯೆಂದು ವಿದೇಶಿ ವಿಶ್ಲೇಷಕರು ಬಣ್ಣಿಸಿದ್ದಾರೆ. ಎರಡನೇ ಮತ್ತು ಮೂರನೇ ಹಂತಗಳು ಪ್ರತ್ಯೇಕಗೊಳ್ಳಲು ವಿಫಲವಾಗಿ ರಾಕೆಟ್ ಪೆಸಿಫಿಕ್‌ನಲ್ಲಿ ಅಪ್ಪಳಿಸಿತೆಂದು ಅವರು ಹೇಳಿದ್ದಾರೆ.ಟೈಪೆಡಾಂಗ್-2 ಕ್ಷಿಪಣಿ ಸುಮಾರು 3200 ಕಿಮೀ ಪ್ರಯಾಣಿಸಿದ್ದು, ಉತ್ತರ ಕೊರಿಯ 1998ರಲ್ಲಿ ಹಾರಿಸಿದ ಟೈಪೊಡಾಂಗ್-1ರ ಉಡಾವಣೆಯ ಎರಡರಷ್ಟು ವ್ಯಾಪ್ತಿಯನ್ನು ಹೊಂದಿದೆಯೆಂದು ದಕ್ಷಿಣ ಕೊರಿಯದ ವಿಶ್ಲೇಷಕರು ತಿಳಿಸಿದ್ದಾರೆ. |