ಪಾಕಿಸ್ತಾನವು ತನ್ನ ಸ್ವಂತ ಉಳಿವಿಗಾಗಿ ಹೋರಾಡುತ್ತಿದೆ ಎಂದು ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಅವರು ಪಾಕಿಸ್ತಾನಕ್ಕೆ ಅಮೆರಿಕದ ವಿಶೇಷ ಪ್ರತಿನಿಧಿಯಾಗಿರುವ ರಿಚರ್ಡ್ ಹಾಲ್‌ಬ್ರೂಕ್ ಅವರಿಗೆ ಹೇಳಿದ್ದಾರೆ. ಅಮೆರಿಕದ ಹೊಸ ಪ್ರಾದೇಶಿಕ ಕಾರ್ಯತಂತ್ರ ಕುರಿತು ಗಮನಸೆಳೆಯಲು ಪಾಕಿಸ್ತಾನದ ಮುಖಂಡರ ಜತೆ ಹಾಲ್‌ಬ್ರೂಕ್ ಚರ್ಚಿಸುತ್ತಿದ್ದು, ಜರ್ದಾರಿಯನ್ನು ಭೇಟಿ ಮಾಡಿದಾಗ ಜರ್ದಾರಿ ಮೇಲಿನ ವಿಷಯ ತಿಳಿಸಿದರು.
ಭಯೋತ್ಪಾದನೆ ಮತ್ತು ಉಗ್ರವಾದದ ವಿರುದ್ಧ ಹೋರಾಟಕ್ಕೆ ಬೇಷರತ್ ಬೆಂಬಲ ಪಾಕಿಸ್ತಾನಕ್ಕೆ ಅಗತ್ಯವೆಂದು ಜರ್ದಾರಿ ಪ್ರತಿಪಾದಿಸಿದರು. ಅಮೆರಿಕ-ಪಾಕ್ ಪರಸ್ಪರ ವಿಶ್ವಾಸದಿಂದಿರುವ ಅಗತ್ಯವಿದ್ದು, ಬುಡಕಟ್ಟು ಪ್ರದೇಶಗಳ ಮೇಲೆ ಡ್ರೋನ್ ವಿಮಾನಗಳ ದಾಳಿಯನ್ನು ಜರ್ದಾರಿ ಖಂಡಿಸಿದರು. ಡ್ರೋನ್ ವಿಮಾನಗಳ ಕ್ಷಿಪಣಿ ದಾಳಿಯಲ್ಲಿ ಅಮಾಯಕ ನಾಗರಿಕರು ಬಲಿಯಾಗುತ್ತಿದ್ದು, ಡ್ರೋನ್ ಬಳಕೆ ಕುರಿತು ಭಿನ್ನಾಭಿಪ್ರಾಯ ಉಂಟಾಗಿದೆ ಎಂದು ಜರ್ದಾರಿ ಹೇಳಿದರು.
ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಸಮುದಾಯದಿಂದ ಶಿಕ್ಷಣ, ಆರೋಗ್ಯ, ತರಬೇತಿ ಮತ್ತು ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಸಾಮಗ್ರಿಗಳ ಖರೀದಿಗೆ ಬೇಷರತ್ ಬೆಂಬಲವು ಅಗತ್ಯವಾಗಿದೆ ಎಂದು ಸಭೆಯ ಬಳಿಕ ಜರ್ದಾರಿ ಹೇಳಿಕೆ ನೀಡಿದರು. ಪಾಕಿಸ್ತಾನವು ತನ್ನ ಉಳಿವಿಗಾಗಿ ಹೋರಾಡುತ್ತಿದ್ದು, ಉಗ್ರಗಾಮಿಗಳ ಯಾವುದೇ ಒತ್ತಡಗಳಿಗೆ ಮಣಿಯುವುದಿಲ್ಲ ಎಂದು ಅವರು ಹೇಳಿದರು. |