ಬರಾಕ್ ಒಬಾಮಾ ಅವರು 'ಸಾಮ್ರಾಜ್ಯಶಾಹಿ ಕತ್ತಲಿನಲ್ಲಿ ಆಸೆಯ ಬೆಳಕು' ಎಂದು ಲಿಬ್ಯಾದ ನಾಯಕ ಮುಹಮದ್ ಗಡಾಫಿ ಮಂಗಳವಾರ ಬಣ್ಣಿಸಿದ್ದಾರೆ. ಆದರೆ ಅಮೆರಿಕದ ಸಾಮ್ರಾಜ್ಯಶಾಹಿ ನೀತಿಗಳಿಗೆ ಮಣಿಯದ ಒಬಾಮಾ ಹತ್ಯೆಯಾಗುವ ಸಂಭವವಿರುವುದಾಗಿ ಅವರು ಶಂಕಿಸಿದ್ದಾರೆ.
ವಿವಾದಾತ್ಮಕ ಹೇಳಿಕೆಗಳಿಗೆ ಹೆಸರಾದ ಗಡಾಫಿ, ಒಬಾಮಾ ಅವರ ಹತ್ಯೆಗೆ ಯಾರು ಬಯಸಿದ್ದಾರೆಂಬುದನ್ನು ಮಾತ್ರ ಬಾಯಿ ಬಿಡಲಿಲ್ಲ. ಮಾಜಿ ಅಧ್ಯಕ್ಷ ಜಾನ್ ಎಫ್.ಕೆನಡಿ, ಅಬ್ರಾಹಂ ಲಿಂಕನ್ ಮತ್ತು ಕರಿಯ ಬಲಪಂಥೀಯ ನಾಯಕ ಮಾರ್ಟಿನ್ ಲೂಥರ್ ಕಿಂಗ್ ಹತ್ಯೆಗಳನ್ನು ಅವರು ಉದಾಹರಿಸಿದರು.
ಸಿರ್ಟೆಯಲ್ಲಿ ವಿಶ್ವವಿದ್ಯಾಲಯದಲ್ಲಿ ನೆರೆದಿದ್ದ ತಮ್ಮ ಬೆಂಬಲಿಗರ ಸಮೂಹವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಒಬಾಮಾ ಅವರಿಗೆ ಒತ್ತಡ ಹಾಕುವವರು ಯಾರೆಂದು ತಿಳಿಸಲಿಲ್ಲ.
ಆಫ್ರಿಕನ್ ಯೂನಿಯನ್ ಅಧ್ಯಕ್ಷರಾಗಿರುವ ಗಡಾಫಿ, ಆಫ್ರಿಕಾ ಮತ್ತಿತರ ಕಡೆ ಭದ್ರತೆ, ಸ್ಥಿರತೆ ಮತ್ತು ಸಮೃದ್ಧಿ ನೆಲೆಸಲು ಒಬಾಮಾ ಜತೆ ಕೆಲಸ ಮಾಡುವ ಪ್ರಸ್ತಾಪವನ್ನು ಮುಂದಿಟ್ಟರು. ಅಮೆರಿಕದ ಹಿತಾಸಕ್ತಿ ರಕ್ಷಣೆಗೆ ಉಳಿದ ದೇಶಗಳಿಗೆ ಆಜ್ಞೆ ನೀಡುತ್ತಿದ್ದ ಅಮೆರಿಕದ ಮುಂಚಿನ ವಿದೇಶಾಂಗ ನೀತಿಯನ್ನು ಮುರಿದ ಒಬಾಮಾರನ್ನು ಗಢಾಪಿ ಮನಸಾರೆ ಶ್ಲಾಘಿಸಿದರು. |