ಇರಾಕಿಗಳು ತಮ್ಮ ರಾಷ್ಟ್ರದ ಜವಾಬ್ದಾರಿ ವಹಿಸಿಕೊಳ್ಳುವ ಕಾಲ ಸನ್ನಿಹಿತವಾಗಿದೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ತಿಳಿಸಿದ್ದಾರೆ.
ಬಾಗ್ದಾದ್‌ಗೆ ಅಧ್ಯಕ್ಷರಾಗಿ ಪ್ರಥಮಬಾರಿಗೆ ಭೇಟಿ ನೀಡಿದ ಒಬಾಮಾ ಅವರನ್ನು ಅಮೆರಿಕದ ಪಡೆಗಳು ಹೃತ್ಪೂರ್ವಕವಾಗಿ ಸ್ವಾಗತಿಸಿವೆ. ಇರಾಕ್‌ನಲ್ಲಿ ಅಸಾಮಾನ್ಯ ಸಾಧನೆ ಮಾಡಿದ್ದಕ್ಕಾಗಿ ಒಬಾಮಾ ಸೇನಾಪಡೆಯನ್ನು ಶ್ಲಾಘಿಸಿದರು. ಇರಾಕ್ ನಾಯಕರ ಜತೆ ಕೂಡ ಒಬಾಮಾ ಚರ್ಚಿಸಿದ್ದು, 2011ರೊಳಗೆ ಎಲ್ಲ ಅಮೆರಿಕ ಪಡೆಗಳನ್ನು ಹಿಂದೆಗೆದುಕೊಳ್ಳುವ ತಮ್ಮ ಯೋಜನೆಯನ್ನು ಪುನರುಚ್ಚರಿಸಿದರು.
ಇರಾಕ್‌ನಲ್ಲಿ ಅಮೆರಿಕದ ಮಿಲಿಟರಿ ಕಮಾಂಡರ್ ಜ. ರೇ ಓಡಿರ್ನೊ ಅವರನ್ನು ಮತ್ತು 140,000 ಯೋಧರಲ್ಲಿ ಕೆಲವರನ್ನು ಅವರು ಭೇಟಿ ಮಾಡಿದರು. ಇರಾಕ್‌ನಲ್ಲಿ ಪರಿಣಾಮಕಾರಿ ಕಾರ್ಯಾಚರಣೆ ಮುನ್ನಡೆಸಲು ಸಹಾಯ ಮಾಡಿದ್ದಕ್ಕಾಗಿ ಜ. ಒಡೆರ್ನೊಗೆ ಅವರು ಧನ್ಯವಾದ ಅರ್ಪಿಸಿದರು. ಕ್ಯಾಂಪ್ ವಿಕ್ಟರಿ ಮಿಲಿಟರಿ ನೆಲೆಯಲ್ಲಿ ಸೇರಿದ್ದ 600 ಅಮೆರಿಕ ಸೈನಿಕರನ್ನು ಉದ್ದೇಶಿಸಿ, 'ಇರಾಕ್ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಸ್ವತಃ ಕಾಲ ಮೇಲೆ ನಿಲ್ಲಲು ಸಹಾಯ ಮಾಡಿದ್ದೀರೆಂದು ಅವರು ಹೇಳಿದರು.
ಇದೊಂದು ಅಸಾಮಾನ್ಯ ಸಾಧನೆಯಾಗಿದ್ದು, ಇದಕ್ಕಾಗಿ ಅಮೆರಿಕದ ಜನರಿಗೆ ಧನ್ಯವಾದ ಸಲ್ಲಿಸುವುದಾಗಿ' ಅವರು ನುಡಿದರು. ಪಡೆಗಳು ಅವರನ್ನು ಹರ್ಷೋದ್ಗಾರದಿಂದ ಸ್ವಾಗತಿಸುತ್ತಾ, ನಾವು ಒಬಾಮಾರನ್ನು ಪ್ರೀತಿಸುತ್ತೇವೆಂದು ಉದ್ಗರಿಸಿದರು. 'ನಾವು ಭದ್ರತೆಯ ಹೊಣೆಯನ್ನು ಇರಾಕಿಗೆ ಹಸ್ತಾಂತರಿಸಲು ಕಾಲ ಸನ್ನಿಹಿತವಾಗಿದೆ.
ಅವರು ರಾಷ್ಟ್ರಕ್ಕಾಗಿ ಜವಾಬ್ದಾರಿ ತೆಗೆದುಕೊಳ್ಳಬೇಕು' ಎಂದು ಅನೇಕ ಸೈನಿಕರ ಜತೆ ನಿಂತು ಛಾಯಾಚಿತ್ರ ತೆಗೆಸಿಕೊಳ್ಳುವ ಮುಂಚೆ ಒಬಾಮಾ ಹೇಳಿದರು. ಸುಮಾರು 5 ಗಂಟೆಗಳ ಭೇಟಿಯಲ್ಲಿ ಇರಾಕಿನ ಪ್ರಧಾನಮಂತ್ರಿ ನೌರಿ ಅಲ್ ಮಲಿಕಿ ಅವರನ್ನು ಭೇಟಿ ಮಾಡುವ ಕಾರ್ಯಕ್ರಮವೂ ಸೇರಿದ್ದು, ಒಬಾಮಾ ಅವರ ಭೇಟಿಗೆ ಮಲಿಕಿ ಕ್ಯಾಂಪ್ ವಿಕ್ಟರಿಗೆ ಪ್ರಯಾಣಿಸಿದರು.
|