ಪೆರುವಿನ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಭದ್ರತಾಪಡೆಗಳಿಗೆ ಹತ್ಯೆಗಳು ಮತ್ತು ಅಪಹರಣಗಳನ್ನು ನಡೆಸುವಂತೆ ಆದೇಶ ನೀಡಿದ ಪೆರುವಿನ ಮಾಜಿ ಅಧ್ಯಕ್ಷ ಆಲ್ಬರ್ಟೊ ಫ್ಯುಜಿಮೋರಿ ಅವರಿಗೆ 25 ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಲಾಗಿದೆ.
15 ತಿಂಗಳ ವಿಚಾರಣೆ ಬಳಿಕ 1990ರಲ್ಲಿ ಗೆರಿಲ್ಲಾಗಳ ಜತೆ ಕದನದಲ್ಲಿ ಎರಡು ಮೃತ್ಯುತುಕಡಿಗಳು 25 ಜನರನ್ನು ಹತ್ಯೆ ಮಾಡಿದ ಘಟನೆಯಲ್ಲಿ ಆಲ್ಬರ್ಟೊ ತಪ್ಪಿತಸ್ಥರೆಂದು ಹೇಳಲಾಗಿದೆ. ಶಿಕ್ಷೆಯ ತೀರ್ಪು ಹೊರಬಿದ್ದ ಬಳಿಕ ತೀರ್ಪಿನ ವಿರುದ್ಧ ಅಪೀಲು ಸಲ್ಲಿಸುವುದಾಗಿ ಫುಜಿಮೋರಿ ಹೇಳಿದ್ದಾರೆ.
ನ್ಯಾಯಕ್ಕಾಗಿ ಹೋರಾಟದಲ್ಲಿ ಮೈಲಿಗಲ್ಲು ಎಂದು ಈ ತೀರ್ಪನ್ನು ಮಾನವ ಹಕ್ಕು ರಕ್ಷಣೆ ಗುಂಪಾದ ಅಮ್ನೆಸ್ಟಿ ಬಣ್ಣಿಸಿದೆ. ಚಿತ್ರಹಿಂಸೆ, ಅಪಹರಣ ಮತ್ತು ನಾಪತ್ತೆ ಪ್ರಕರಣಗಳಲ್ಲಿ ಮಾನವ ಹಕ್ಕು ಉಲ್ಲಂಘನೆಗಳಿಗೆ ರಾಷ್ಟ್ರದ ಮಾಜಿ ಮುಖ್ಯಸ್ಥರಿಗೆ ಶಿಕ್ಷೆಯಾಗಿರುವುದು ಸಾಮಾನ್ಯ ಸಂಗತಿಯಲ್ಲ.
ಲ್ಯಾಟಿನ್ ಅಮೆರಿಕ ಮತ್ತು ವಿಶ್ವಾದ್ಯಂತ ಅನೇಕ ವಿಚಾರಣೆಗಳಿಗೆ ಇದು ಮುನ್ನುಡಿ ಬರೆಯುತ್ತದೆಂದು ಆಶಿಸುವುದಾಗಿ ಅಮ್ನೆಸ್ಟಿ ವಕ್ತಾರ ಜಾವಿಯರ್ ಜುನೀಗಾ ತಿಳಿಸಿದರು.ಅಧಿಕಾರ ದುರುಪಯೋಗದ ಪ್ರತ್ಯೇಕ ಪ್ರಕರಣಗಳಲ್ಲಿ ತಪ್ಪಿತಸ್ಥರೆಂದು ಕಂಡುಬಂದಿದ್ದರಿಂದ ಫ್ಯುಜಿಮೋರಿ ಈಗಾಗಲೇ 6 ವರ್ಷಗಳ ಅವಧಿಯ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. |