ಅಮೆರಿಕದ ಮಾಜಿ ಅಧ್ಯಕ್ಷ ಬುಷ್ ಅವರ ಮೇಲೆ ಬೂಟು ಪ್ರಹಾರ ಮಾಡಿದ ಇರಾಕಿ ಪತ್ರಕರ್ತನಿಗೆ ಶಿಕ್ಷೆಯನ್ನು 3 ವರ್ಷಗಳ ಅವಧಿಯಿಂದ ಒಂದು ವರ್ಷದ ಅವಧಿಗೆ ಕಡಿತಗೊಳಿಸಲಾಗಿದೆ. ಪತ್ರಕರ್ತ ಜೈದಿಯ ವಕೀಲರು ಜೈದಿ ವಿರುದ್ಧ ಹಲ್ಲೆ ಆರೋಪದಿಂದ ವಿದೇಶಿ ನಾಯಕನಿಗೆ ಅವಹೇಳನ ಮಾಡಿದ ಆರೋಪಕ್ಕೆ ಪರಿವರ್ತಿಸಬೇಕೆಂದು ಮನವಿ ಮಾಡಿದ್ದರು.
ನ್ಯಾಯಾಧೀಶರು ಒಪ್ಪಿಕೊಂಡು ಅಪರಾಧದ ಗಂಭೀರತೆ ಕಡಿಮೆಯಾದ್ದರಿಂದ ಶಿಕ್ಷೆಯ ಅವಧಿಯನ್ನು ತಗ್ಗಿಸಿದರು. ಜೈದಿ ವಿರುದ್ಧ ಪೂರ್ವಭಾವಿಯಾಗಿ ಯಾವುದೇ ಕ್ರಿಮಿನಲ್ ಹಿನ್ನಲೆ ಇಲ್ಲದಿರುವುದನ್ನು ಕೂಡ ನ್ಯಾಯಾಧೀಶರು ಪರಿಗಣಿಸಿದರೆಂದು ಕೋರ್ಟ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಜೈದಿ ಇನ್ನೂ ಯುವಕನಾಗಿದ್ದು, ಮುಂಚೆ ಯಾವುದೇ ಶಿಕ್ಷೆಗೆ ಒಳಗಾಗದಿರುವುದರಿಂದ ಅಪೀಲು ನ್ಯಾಯಾಲಯ ಶಿಕ್ಷೆಯನ್ನು ತಗ್ಗಿಸಿದ ತೀರ್ಪು ನೀಡಿದೆ ಎಂದು ಇರಾಕಿ ನ್ಯಾಯಾಂಗ ಮಂಡಳಿಯ ವಕ್ತಾರ ತಿಳಿಸಿದರು.
ಕಳೆದ ಡಿ.2008ರಲ್ಲಿ ಬುಷ್ ಇರಾಕಿ ಪ್ರಧಾನಮಂತ್ರಿ ಜತೆ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದಾಗ ಬೂಟು ಎಸೆತದ ಪ್ರಕರಣ ಜರುಗಿತ್ತು. ಜೈದಿ ಬುಷ್ ಅವರನ್ನು ನಾಯಿ ಎಂದು ನಿಂದಿಸುತ್ತಾ, ಇರಾಕ್‌ನಲ್ಲಿ ಅಮೆರಿಕದ ಆಕ್ರಮಣದಿಂದ ಅಸುನೀಗಿದ, ತಬ್ಬಲಿಗಳಾದ ಅಥವಾ ವಿಧವೆಯರಿಂದ ವಿದಾಯದ ಮುತ್ತೆಂದು ಹೇಳುತ್ತಾ ತನ್ನ ಎರಡು ಬೂಟುಗಳನ್ನು ಬುಷ್ ಅವರತ್ತ ಬೀಸಿ ಒಗೆದಿದ್ದ. |