ಪಾಕಿಸ್ತಾನದ ಬುಡಕಟ್ಟು ಪ್ರದೇಶಗಳಲ್ಲಿ ತಾಲಿಬಾನ್ ಹಾಗೂ ಒಸಾಮಾ ಬಿನ್ ಲಾಡೆನ್ ಸಹಿತ ಅಲ್ ಖಾಯಿದಾ ಮುಖಂಡರು ಅಡಗಿದ್ದಾರೆಂದು ಅಮೆರಿಕ ಉಪಾಧ್ಯಕ್ಷ ಜೋಯಿ ಬಿಡೆನ್ ತಿಳಿಸಿದ್ದಾರೆ.
ಆಫ್ಘಾನಿಸ್ತಾನದ ಗಡಿಯಲ್ಲಿ ಪಾಕಿಸ್ತಾನದ ಪಶ್ಚಿಮಕ್ಕೆ ಪರ್ವತಪ್ರದೇಶಗಳಾದ ಫಾಟಾದಲ್ಲಿ ಅಲ್ ಖಾಯಿದಾ ನೆಲೆಸಿದ್ದು, ಬಿನ್ ಲಾಡೆನ್ ಕೂಡ ಅಲ್ಲಿಯೇ ಇದ್ದಾನೆ. ತಾಲಿಬಾನ್ ಮೂಲಭೂತವಾದಿ ಭಾಗ ಕೂಡ ಅಲ್ಲೇ ಬೀಡುಬಿಟ್ಟಿದೆ ಎಂದು ಟೆಲಿವಿಷನ್ ನ್ಯೂಸ್ ಚಾನೆಲ್ ಸಂದರ್ಶಕರಿಗೆ ಅವರು ತಿಳಿಸಿದರು.
'ಭಯೋತ್ಪಾದನೆ ಕುರಿತು ಜಾಗತಿಕ ಯುದ್ಧ' ನುಡಿಗಟ್ಟಿನ ಬಳಕೆಯನ್ನು ಒಬಾಮಾ ಆಡಳಿತ ನಿಲ್ಲಿಸಿದೆಯೇ ಎಂಬ ಪ್ರಶ್ನೆಗೆ,ವಿಶ್ವದ ಇತರ ಕಡೆ ಉದ್ಭವಿಸಿರುವ ಎಲ್ಲ ಸಮಸ್ಯೆಗಳು ಭಯೋತ್ಪಾದನೆಗೆ ಸಂಬಂಧಿಸಿಲ್ಲ ಎಂದು ಬಿಡೆನ್ ಹೇಳಿದರು. ಭಯೋತ್ಪಾದನೆ ಬೆದರಿಕೆಯು ಅಲ್ ಖಾಯಿದಾ ಮತ್ತು ಅದಕ್ಕೆ ಬೆಂಬಲ ನೀಡುವ ಸಂಘಟನೆಗಳಿಂದ ಬಂದಿದೆ.
ಆದರೆ ಇತರೆ ಹಿತಾಸಕ್ತಿಗಳು, ಉದಾಹರಣೆಗೆ ಮಧ್ಯಪೂರ್ವದ ಪರಿಸ್ಥಿತಿಯು ಭಯೋತ್ಪಾದನೆ ವಿರುದ್ಧ ಜಾಗತಿಕ ಯುದ್ಧವಲ್ಲ ಎಂದು ಬಿಡೆನ್ ಹೇಳಿದರು.ಅಲ್ ಖಾಯಿದಾ ಬುಷ್ ಆಡಳಿತದ ಅಡಿಯಲ್ಲಿ ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಗಡಿಯ ಪರ್ವತ ಪ್ರದೇಶಗಳಲ್ಲಿ ನೆಲೆ ಕಲ್ಪಿಸಿಕೊಂಡಿರುವುದು ಒಬಾಮಾ ಆಡಳಿತಕ್ಕೆ ಕಳವಳಕಾರಿಯಾಗಿದೆ ಎಂದು ಉಪಾಧ್ಯಕ್ಷರು ತಿಳಿಸಿದರು. |