ತಮ್ಮ ದೂರಗಾಮಿ ರಾಕೆಟ್‌ನ್ನು ಬಾಹ್ಯಾಕಾಶಕ್ಕೆ ಉಪಗ್ರಹ ಒಯ್ಯಲು ಬಳಸಲಾಯಿತೇ ಹೊರತು ಕ್ಷಿಪಣಿ ಪರೀಕ್ಷೆಗಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿರುವ ಉತ್ತರಕೊರಿಯ, ವಿಶ್ವಸಂಸ್ಥೆ ಭದ್ರತಾ ಮಂಡಳಿ ನಮ್ಮ ವಿರುದ್ಧ ಯಾವುದೇ ಕ್ರಮ ಕೈಗೊಂಡರೆ ಉಗ್ರ ಹೆಜ್ಜೆಗಳೊಂದಿಗೆ ಪ್ರತಿದಾಳಿ ನಡೆಸುತ್ತದೆಂದು ಎಚ್ಚರಿಸಿದೆ.
ಮಂಡಳಿಯ ಯಾವುದೇ ಕ್ರಮ ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ರಾಷ್ಟ್ರದ ಸಾರ್ವಬೌಮತೆ ಮೇಲೆ ದಾಳಿ ಮಾಡಿದರೆ ತೀಕ್ಷ್ಣ ಕ್ರಮಗಳು ಹಿಂದೆಯೇ ಅನುಸರಿಸುತ್ತವೆ ಎಂದು ಉತ್ತರಕೊರಿಯ ಉಪ ವಿಶ್ವಸಂಸ್ಥೆ ರಾಯಭಾರಿ ಪಾಕ್ ಟೋಕ್ ಹನ್ ಎಚ್ಚರಿಸಿದರು.
ರಾಕೆಟ್ ಉಡಾವಣೆ ಹೇಗೆ ಪ್ರತಿಕ್ರಿಯಿಸುವುದೆಂದು ಭದ್ರತಾ ಮಂಡಳಿಯಲ್ಲಿ ಗೊಂದಲ ಮೂಡಿರುವ ನಡುವೆ, ಪಾಕ್ ಟಾಕ್ ಹನ್ ಹೇಳಿಕೆ ಹೊರಬಿದ್ದಿದೆ. ಜಪಾನ್ ಉತ್ತರಕೊರಿಯವನ್ನು ಬಲವಾಗಿ ಖಂಡಿಸಿದ್ದು, ಚೀನಾ ಮತ್ತು ರಷ್ಯಾ ಮೃದುಧೋರಣೆಯನ್ನು ಬಯಸಿದೆ.
ತಮ್ಮ ರಾಷ್ಟ್ರವು ಉಪಗ್ರಹ ಉಡಾವಣೆ ಮಾಡಿದ್ದರಿಂದ ಯಾವುದೇ ನಿರ್ಣಯ ಉಲ್ಲಂಘನೆಯಾಗಿಲ್ಲವೆಂದು ಹೇಳಿದ ಅವರು, ಪಾಶ್ಚಿಮಾತ್ಯ ರಾಷ್ಟ್ರಗಳು ನೂರಾರು ಉಪಗ್ರಹಗಳನ್ನು ಪ್ರತಿ ವರ್ಷ ಹಾರಿಸುತ್ತಿದ್ದು ನಮ್ಮ ದೇಶದ ಮೇಲೆ ಗುರಿಯಿರಿಸಿರುವಾಗ ನಾವು ಒಂದು ಉಪಗ್ರಹ ಉಡಾವಣೆ ಮಾಡಿದರೇ ತಪ್ಪೇನು ಎಂದು ಪ್ರಶ್ನಿಸಿದ್ದಾರೆ. |